
ಮೈಸೂರು: ಅಣಕು ಪರೀಕ್ಷೆಗಳು ಅಭ್ಯರ್ಥಿಗಳ ಶಕ್ತಿ ಹಾಗೂ ದೌರ್ಬಲ್ಯ ಎರಡನ್ನೂ ಎತ್ತಿ ತೋರಿಸುವುದರಿಂದ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ನೆರವಾಗುತ್ತವೆ ಎಂದು ಮೈಸೂರು ಉಪ ವಿಭಾಗಾಧಿಕಾರಿ ಆಶಪ್ಪ ಕೆ. ಹೇಳಿದರು.
ಆಗಸ್ಟ್ 2 ರಂದು ರಾಜ್ಯ ಮಟ್ಟದಲ್ಲಿ ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಉದ್ಯೋಗಾಕಾಂಕ್ಷಿಗಳ ನೆರವಿಗಾಗಿ, ಮೈಸೂರು ನಗರ ಕೇಂದ್ರ ಗ್ರಂಥಾಲಯ ಹಾಗೂ ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಹಯೋಗದೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಕ್ಕೆ ಸಂಬAಧಿಸಿದAತೆ ಆಯೋಜಿಸಲಾಗಿದ್ದ 06ನೇ ಉಚಿತ ಅಣಕು ಪರೀಕ್ಷೆಗೆ ಚಾಲನೆ ನೀಡಿ ಮಾತನಾಡಿದ
ಅವರು, ಸರ್ಕಾರಿ ಶಾಲೆಯಲ್ಲಿ ಓದಿ ಗ್ರಂಥಾಲಯಗಳ ಮೂಲಕ ಸಿದ್ಧತೆ ನಡೆಸಿ ಯಶಸ್ಸು ಕಂಡ ತಮ್ಮ ಅನುಭವವನ್ನು ಹಂಚಿಕೊAಡ ಅವರು, ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸಿ ಸತತ ಪ್ರಯತ್ನ ಮುಂದುವರಿಸಬೇಕು ಹಾಗೂ ಸಮಾಜವು ಜ್ಞಾನಕ್ಕೆ ನೀಡುವ ಗೌರವವನ್ನು ಮನಗಂಡು ಯೋಗ ಮತ್ತು ಶಿಸ್ತಿನಿಂದ ಸಾರ್ಥಕ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ತರಬೇತಿ ಕೇಂದ್ರದ ಮುಖ್ಯಸ್ಥ ರಮೇಶ್ ನರಸಯ್ಯ ಮಾತನಾಡಿ, ಇದೇ ತಿಂಗಳ 27 ರಂದು ಸಾಮಾನ್ಯ ಜ್ಞಾನ ಹಾಗೂ ಭೌತಿಕ ಸಾಮರ್ಥ್ಯದ ಅಣಕು ಪರೀಕ್ಷೆ ಮತ್ತು 29 ರಂದು ಎಲ್ಲಾ ವಿಷಯಗಳನ್ನೊಳಗೊಂಡ ಸಮಗ್ರ ಅಣಕು ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ್ ಬಿ. ಮಾತನಾಡಿ, ಮುಂಬರುವ ಗೆಜೆಟೆಡ್ ಪ್ರೊಬೇಷನರ್ಸ್ ಹಾಗೂ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರ ನೇಮಕಾತಿ ಪರೀಕ್ಷೆಗಳಿಗೂ ಸಹ ಮೈಸೂರಿನ ಕೆಎಎಸ್ ಅಧಿಕಾರಿಗಳು ಹಾಗೂ ವಿಷಯ ಪರಿಣಿತರಿಂದ ಉಚಿತ ತರಬೇತಿ ಮತ್ತು ಅಣಕು ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಆಸಕ್ತ ಉದ್ಯೋಗಾಕಾಂಕ್ಷಿಗಳು ತಕ್ಷಣವೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಿ ಎಂದು ಹೇಳಿದರು.