
ಮೈಸೂರು: ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಅತ್ಯಂತ ದುರದೃಷ್ಟಕರ ಹಾಗೂ ಖಂಡನೀಯ ಘಟನೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ದೇಶದ ಪ್ರತಿಯೊಬ್ಬ ನಾಗರಿಕರಿಗೂ ನೋವುಂಟು ಮಾಡುವ ಸಂಗತಿಯಾಗಿದೆ ಎಂದು ಭಾರತೀಯ ಜನತಾ ಪಕ್ಷದ ಮೈಸೂರು ಮಹಾನಗರ ಮಾಧ್ಯಮ ಸಹ ಸಂಚಾಲಕ ಸಂತೋಷ್ ಕುಮಾರ್ ಬಿ.ಎಂ. ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಂಡಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಲವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಫಾಸ್ಟ್ ಟ್ರಾ÷್ಯಕ್ ನ್ಯಾಯಾಲಯಗಳ ಮೂಲಕ ಕ್ರಮ ಕೈಗೊಳ್ಳುವ ಬಗ್ಗೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಾರದರ್ಶಕ ಹಾಗೂ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಸಂದರ್ಭದಲ್ಲಿ, ಕೆಲವು ರಾಜಕೀಯ ಪಕ್ಷಗಳು ಈ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.
ಜಂತರ್ ಮಂತರ್ನಲ್ಲಿ ಆರಂಭವಾದ ಪ್ರತಿಭಟನೆಗಳನ್ನು ಪ್ರಧಾನಮಂತ್ರಿಗಳ ನಿವಾಸದ ಸಮೀಪಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆದಿದ್ದು,
ಪ್ರತಿಭಟನೆಯ ವೇಳೆ ಪೊಲೀಸ್ ಸಿಬ್ಬಂದಿ, ಸರ್ಕಾರಿ ವಾಹನಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮತ್ತು ಅಸಭ್ಯ ವರ್ತನೆ ನಡೆದಿರುವುದು ಖಂಡನೀಯ. ಇಂತಹ ಹಿಂಸಾತ್ಮಕ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರತಿಭಟನೆಯ ವೇಳೆ ಸಮೀಪದಲ್ಲಿದ್ದ ಹನುಮ ದೇವಸ್ಥಾನದ ಮೇಲೂ ದಾಳಿ ನಡೆದಿರುವ ಬಗ್ಗೆ ವರದಿಗಳು ಬಂದಿದ್ದು, ಈ ಘಟನೆಗಳ ಹಿಂದೆ ಸಂಚು ಅಥವಾ ದೇಶವಿರೋಧಿ ಶಕ್ತಿಗಳ ಕೈವಾಡವಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರದೊಂದಿಗೆ ರಚನಾತ್ಮಕ ಸಂವಾದ ನಡೆಸುವ ಬದಲು, ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಬೆಳವಣಿಗೆ. ಹಲವು ದಶಕಗಳ ಕಾಲ ದೇಶವನ್ನು ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಇಂದು ಇತರ ಪಕ್ಷಗಳೊಂದಿಗೆ ಸೇರಿ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ದುರಂತದಲ್ಲಿ ೧೧ ಅಮೂಲ್ಯ ಜೀವಗಳು ಬಲಿಯಾದ ಪ್ರಕರಣದಲ್ಲಿ ಇನ್ನೂ ಸಮರ್ಪಕ ನ್ಯಾಯ ದೊರೆತಿಲ್ಲ. ಆ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಗಳು ರಾಜೀನಾಮೆ ನೀಡದಿರುವುದನ್ನು ಕಾಂಗ್ರೆಸ್ನ ದ್ವಂದ್ವ ನಿಲುವಿಗೆ ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಯೇ ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ಈ ವಿಷಯದಲ್ಲಿ ರಾಜಕೀಯ ಮಾಡದೇ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.