
ಮೈಸೂರು; ತಾಲ್ಲೂಕಿನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಸ್ವೀಪ್ ವತಿಯಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಶುಕ್ರವಾರ ಚಾಮುಂಡಿಬೆಟ್ಟದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್ ನೇತೃತ್ವದಲ್ಲಿ ಸ್ವೀಪ್ ಚಟುವಟಿಕೆ ಜರುಗಿತು.
ಎಸ್ ಐಆರ್ ಭಾಗವಾಗಿ ನಾಗರಿಕರು ತಮ್ಮ ಮತದಾರರ ಗುರುತಿನ ಚೀಟಿಗೆ ಸಂಬAಧಿಸಿದ ಆಕ್ಷೇಪಣೆ ಹಾಗೂ ತಿದ್ದುಪಡಿ ಮಾಡಿಸಲು ಸೆ.19 ಮತ್ತು 20 ರಂದು ನಡೆಯುವ “ಸಾರ್ವಜನಿಕ ವಿಶೇಷ ಅಭಿಯಾನ” ಸಂಬAಧಿಸಿದ ಭಿತ್ತಿಪತ್ರ ಬಿಡುಗಡೆಗೊಳಿಸಿದ ಅವರು, ಹಸ್ತಾಕ್ಷರ ಸಂಗ್ರಹಣಾ ಅಭಿಯಾನ ಹಾಗೂ ಜಾಗೃತಿ ಜಾಥಾಗೆ ಚಾಲನೆ ನೀಡಿದರು.
ಈ ವೇಳೆ ತಹಶಿಲ್ದಾರ್ ಮಹೇಶ್ ಕುಮಾರ್ ಮಾತನಾಡಿ, ಅರ್ಹ ನಾಗರಿಕರ ಹೆಸರನ್ನು ಸೇರಿಸಲು ಮತ್ತು ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಎಸ್ ಐಆರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಭೇಟಿ ನೀಡಿ, ತಮ್ಮ ಹೆಸರನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳಿದ್ದರೆ ಮಾಡಿಸಿಕೊಳ್ಳಬಹುದು ಎಂದರು.
ನಿಗದಿತ ಸಮೂನೆ ಪಡೆದು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಪಟ್ಟಿಯಿಂದ ಹೆಸರು ತೆಗೆದುಹಾಕಲು ಹಾಗೂ ಮತದಾರರ ಚೀಟಿಯಲ್ಲಿನ ತಿದ್ದುಪಡಿಗಳು ಮತ್ತು ವಿಳಾಸ ಬದಲಾವಣೆಗೆ ಮಾಡಬಹುದು ಎಂದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಮಾತನಾಡಿ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು, ಅದರ ಭಾಗವಾಗಿ ಇದೇ ಶನಿವಾರ ಮತ್ತು ಭಾನುವಾರ ವಿಶೇಷ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಈ ಅಭಿಯಾನದ ಅಂಗವಾಗಿ ಎಲ್ಲಾ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಿದ್ದು, ನಾಗರಿಕರು ಆಕ್ಷೇಪಣೆಗಳ ಅರ್ಜಿಗಳನ್ನು ಸಲ್ಲಿಸಬಹುದು. 18 ವರ್ಷ ತುಂಬಿದ ಅರ್ಹ ಯುವ ಮತದಾರರು ಕೂಡ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬಹುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಭೀಮಪ್ಪ ಕೆ.ಲಾಳಿ ಅವರು, ಸಿಡಿಪಿಒ ವೆಂಕಟಪ್ಪ, ಗ್ರಾ.ಪಂ.ಆಡಳಿತಾಧಿಕಾರಿ ವೈ.ಎನ್.ಮಮತಾ, ತಾ.ಪಂ. ಸಹಾಯಕ ನಿರ್ದೇಶಕ ಕೆ.ರುಕ್ಮಾಂಗದ ಸೇರಿದಂತೆ ತಾಲ್ಲೂಕಿನ ಎಲ್ಲಾ ಪಿಡಿಒಗಳು, ಎನ್.ಆರ್.ಎಲ್.ಎಂ ಸಿಬ್ಬಂದಿ, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಮತಗಟ್ಟೆ ಅಧಿಕಾರಿಗಳು, ಪಶುಸಖಿ, ಕೃಷಿಸಖಿ, ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.