
- ಮೈಸೂರು ವಿವಿ ವಿಶೇಷ ಆಸಕ್ತಿ
- ನಾಲ್ಕು ಕಡೆ ಅದ್ದೂರಿ ಕಾರ್ಯಕ್ರಮ
ಮೈಸೂರು: ಪ್ರಸಕ್ತ ಸಾಲಿನ ವಿಶ್ವ ಯೋಗ ದಿನವನ್ನು ಯೋಗ ನಗರ ಮೈಸೂರಿನ ನಾಲ್ಕು ಪ್ರಧಾನ ವೇದಿಕೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದ ಫಲವಾಗಿ ವಿಶ್ವ ಸಂಸ್ಥೆ 2015ರಲ್ಲಿ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿತು. ಕಳೆದ 11 ವರ್ಷಗಳಲ್ಲೂ ಯೋಗಾಚರಣೆಯ ಬಹುತೇಕ ಚಟುವಟಿಕೆಗಳು ಮೈಸೂರು ಅರಮನೆ ಅಂಗಳದಲ್ಲೇ ನಡೆದಿವೆ.
ಈ ಬಾರಿ ಯೋಗಾಪಟುಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ವಿನೂತನ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಮೈಸೂರು ಅರಮನೆ ಅಂಗಳದಲ್ಲೂ ಯೋಗಾಭ್ಯಾಸ ನಡೆಯಲಿದೆ. ಹೆಚ್ಚುವರಿಯಾಗಿ ಮಹಾರಾಜ ಕಾಲೇಜು ಕ್ರಿಕೆಟ್ ಮೈದಾನ, ಓವೆಲ್ ಮೈದಾನ ಮತ್ತು ಕೆಎಸ್ಒಯು ಮೈದಾನದಲ್ಲೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ.
ಮಹಾರಾಜ ಮೈದಾನ: ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಪ್ರಸಕ್ತ ಸಾಲಿನ ಯೋಗ ದಿನಾಚರಣೆಯನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲೋಕನಾಥ್, ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ, ಸ್ನಾತಕ ಪದವಿ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಯೋಗ ದಿನ ಕಾರ್ಯಕ್ರಮ ರೂಪಿಸಲಾಗಿದೆ. ಕಳೆದ ವರ್ಷ ಗಂಗೋತ್ರಿ ಗ್ಲೇಡ್ಸ್ ಕ್ರಿಕೆಟ್ ಮೈದಾನದಲ್ಲಿ ಅದ್ದೂರಿಯಾಗಿ ಯೋಗ ದಿನ ಆಚರಿಸಲಾಗಿತ್ತು. ಈ ಬಾರಿ ಜೂನ್ 21ರಂದು ಗ್ಲೇಡ್ಸ್ ಮೈದಾನದಲ್ಲಿ ಮಹಾರಾಜ ಕಪ್- ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಇದೆ. ಹೀಗಾಗಿ ಗಂಗೋತ್ರಿ ಗ್ಲೇಡ್ಸ್ ಬದಲಿಗೆ ಮಹಾರಾಜ ಕ್ರಿಕೆಟ್ ಮೈದಾನದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಸಾರ್ವಜನಿಕರ ಸಹಭಾಗಿತ್ವವೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣಕ್ಕಾಗಿ ಓವೆಲ್ ಮೈದಾನದಲ್ಲೂ ಕಾರ್ಯಕ್ರಮ ಏರ್ಪಡಿಸಲಾಗಿದೆ. ಯಶಸ್ವಿಯಾಗಿ ಕಾರ್ಯಕ್ರಮ ರೂಪಿಸಲು ಅಗತ್ಯ ಕ್ರಮ ವಹಿಸುವಂತೆ ಯೋಗಿಕ್ ಸೈನ್ಸ್ ವಿಭಾಗ ಹಾಗೂ ದೈಹಿಕ ಶಿಕ್ಷಣ ವಿಭಾಗಕ್ಕೆ ಸೂಚನೆ ನೀಡಿದ್ದೇನೆʼ ಎಂದು ತಿಳಿಸಿದರು.
1500 ನೋಂದಣಿ: ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಏರ್ಪಡಿಸಿರುವ ಯೋಗ ದಿನದಲ್ಲಿ ಪಾಲ್ಗೊಳ್ಳಲು ಈಗಾಗಲೇ 1500 ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಯೋಗಿಕ್ ಸೈನ್ಸ್ ವಿಭಾಗದ ನಿರ್ದೇಶಕ ಪ್ರೊ.ಷಣ್ಮುಗ ಮದಿ ಅಲಗನ್ ಮಾಹಿತಿ ನೀಡಿದರು.
ಯೋಗಿಕ್ ಸೈನ್ಸ್ ವಿಭಾಗ, ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರ (ಎಂಎಂಟಿಸಿ), ಮೈಸೂರು ವಿಶ್ವವಿದ್ಯಾಲಯ ಶಿಕ್ಷಕರ ಸಂಘ(ಎಂಯುಟಿಎ), ಇಂಟರ್ ಕ್ವಾಲಿಟಿ ಅಶ್ಯುರೆನ್ಸ್ ಕಮಿಟಿ(ಐಕ್ಯೂಎಸಿ), ಶೈಕ್ಷಣಿಕ ಬಹುಮಾಧ್ಯಮ ಸಂಶೋದನಾ ಸಂಸ್ಥೆ(ಇಎಂಎಂಆರ್ಸಿ), ರಾಷ್ಟ್ರೀಯ ಸೇವಾ ಯೋಜನೆ, ವಿದ್ಯಾರ್ಥಿ ಕ್ಷೇಪಪಾಲನಾ ವಿಭಾಗ ಸೇರಿದಂತೆ ಎಲ್ಲ ವಿಭಾಗಗಳು, ಸಂಘ-ಸಂಸ್ಥೆಗಳನ್ನು ಸೇರಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಯೋಗ ಫೆಡರೇಷನ್ ಆಫ್ ಮೈಸೂರು ಅಧ್ಯಕ್ಷ ಶ್ರೀಹರಿ ದ್ವಾರಕನಾಥ್ ಸೇರಿದಂತೆ ಕುಲಸಚಿವರು, ಆಡಳಿತ ಮಂಡಳಿ, ಸಿಂಡಿಕೇಡ್ ಸದಸ್ಯರು, ಬೋಧಕ ಹಾಗೂ ಭೋದಕೇತರ ಸಿಬ್ಬಂದಿ ಸೇರಿದಂತೆ ಎಲ್ಲರೂ ಪಾಲ್ಗೊಳ್ಳಲಿದ್ದಾರೆ. ದಿನದಲ್ಲಿ ಪಾಲ್ಗೊಳ್ಳುವ 1000 ಜನರಿಗೆ ಟೀಶರ್ಟ್ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಮೊದಲ ಬಂದವರಿಗೆ ಆದ್ಯತೆ ಮೇರೆಗೆ ಟೀಶರ್ಟ್ಗಳ ವಿತರಣೆ ನಡೆಯಲಿದೆ ಎಂದು ವಿವರಿಸಿದರು.
ಅರಮನೆ ಮೈದಾನದಲ್ಲಿ ಯೋಗಾಭ್ಯಾಸ
ಮೈಸೂರು ಅರಮನೆ ಮೈದಾನದಲ್ಲಿ ಮೈಸೂರು ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಆಯುಷ್ ಇಲಾಖೆ, ಅರಮನೆ ಆಡಳಿತ ಮಂಡಳಿ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಸರ್ಕಾರಿ ಕಾರ್ಯಕ್ರಮ ನಡೆಯಲಿದೆ.
ಪ್ರತಿ ವರ್ಷದಂತೆ ಅರಮನೆ ಮೈದಾನದಲ್ಲೂ ಸಾವಿರಾರು ಸಂಖ್ಯೆಯಲ್ಲಿ ಯೋಗಾಸಕ್ತರು ಪಾಲ್ಗೊಳ್ಳಲಿದ್ದಾರೆ. ಸರ್ಕಾರದ ಶಿಷ್ಟಾಚಾರದನ್ವಯ ಸಚಿವರು, ಶಾಸಕರು, ವಿಧಾನ ಪರಿಷತ್ತು ಸದಸ್ಯರು, ನಿಗಮ- ಮಂಡಳಿ ಅಧ್ಯಕ್ಷರು, ಅಧಿಕಾರಿಗಳು ಯೋಗಾಸನ ಮಾಡಲಿದ್ದಾರೆ.
ಯೋಗ ದಿನದ ಯಶಸ್ಸಿಗೆ ಸಂಸದರೂ ಆಗಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶೇಷ ಆಸಕ್ತಿ ವಹಿಸಿದ್ದಾರೆ. ಮೈಸೂರಿನಲ್ಲಿ 120ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯುತ್ತಿರುವ ಯೋಗ ದಿನದ ಕಾರ್ಯಕ್ರಮಗಳಿಗೆ ಯದುವೀರ್ ಒಡೆಯರ್ ಮುಂಚೂಣಿಯಲ್ಲಿ ನಿಂತು ಆಯೋಜಕರು ಹಾಗೂ ಸರ್ಕಾರದೊಂದಿಗೆ ಸಮನ್ವಯ ನಿರ್ವಹಿಸುತ್ತಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಅತ್ಯಂತ ಅಚ್ಚುಕಟ್ಟಾಗಿ ಯೋಗ ದಿನ ಆಚರಣೆ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಈಗಾಗಲೇ ನೋಂದಣಿ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಂ.ಕೆ.ಸವಿತಾ, ಕುಲಸಚಿವೆ, ಮೈಸೂರು ವಿಶ್ವವಿದ್ಯಾಲಯ
ದೇಹ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಯೋಗ ಸಹಕಾರಿಯಾಗಿದೆ. ಹೀಗಾಗಿ ಯೋಗಾಭ್ಯಾಸದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕೆಂಬುದು ನನ್ನ ಮನವಿ. ಮೈಸೂರು ವಿಶ್ವವಿದ್ಯಾಲಯ ಮಹಾರಾಜ ಕಾಲೇಜು ಕ್ರಿಕೆಟ್ ಮೈದಾನ ಹಾಗೂ ಓವೆಲ್ ಮೈದಾನದಲ್ಲಿ ಬೃಹತ್ ಪ್ರಮಾಣದ ಕಾರ್ಯಕ್ರಮ ರೂಪಿಸಿದ್ದು, ಆಸಕ್ತ ಎಲ್ಲರೂ ಪಾಲ್ಗೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಪ್ರೊ.ಲೋಕನಾಥ್, ಕುಲಪತಿ, ಮೈಸೂರು ವಿಶ್ವವಿದ್ಯಾಲಯ
