Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಬಿಡದಿ ರೈತರ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಸಂಯುಕ್ತ ಹೋರಾಟ ಕರ್ನಾಟಕ ತೀವ್ರ ಖಂಡನೆ


ಮೈಸೂರು; ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಬೈರಮಂಗಲ -ಕಂಚುಗಾರನಹಳ್ಳಿ ಭೂ ಹಿತರಕ್ಷಣಾ ಸಂಘ ಜಂಟಿಯಾಗಿ ನಡೆಸಿದ ವಿಧಾನ ಸೌಧ ಚಲೋ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದ ಭರವಸೆಗಳನ್ನು ಜಾರಿ ಮಾಡುವಂತೆ ಆಗ್ರಹಿಸಿ, ಕಳೆದ ಐದು ದಿನಗಳಿಂದ ಬೈರಮಂಗಲ ವೃತ್ತದಲ್ಲಿ ರಸ್ತೆ ತಡೆ ಹಾಗೂ ಸರಣಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರು ಹಾಗೂ ರೈತ ಮಹಿಳೆಯರ ಮೇಲೆ ಅಮಾನುಷ ದೌರ್ಜನ್ಯ ನಡೆಸಿ ನೂರಕ್ಕೂ ಹೆಚ್ಚು ರೈತರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿರುವುದನ್ನು ಸಂಯುಕ್ತ ಹೋರಾಟ ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಯೋಜಕರಾದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,
ಬಿಡದಿ ಟೌನ್ ಶಿಪ್ ಯೋಜನೆ ಯನ್ನು ಕಾನೂನಾತ್ಮಕ, ಮಾನವೀಯ ಹಾಗೂ ಸಮಗ್ರ ಅಭಿವೃದ್ಧಿ ಚೌಕಟ್ಟಿನಲ್ಲಿ ಪರಿಶೀಲಿಸಿ, ವರದಿ ನೀಡಲು ರಾಜ್ಯ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಜಿ ನರೇಂದರ್ ಸಮಿತಿಗೆ ಪರಿಸರ ತಜ್ಞರು, ಕೃಷಿ ತಜ್ಞರು, ಸಮಾಜ ವಿಜ್ಞಾನಿಗಳನ್ನು ಸೇರ್ಪಡೆ ಮಾಡಿ, ಕೂಡಲೇ ಕಾರ್ಯಾರಂಭ ಮಾಡುವುದಾಗಿ, ಸಮಿತಿ ಖುದ್ದಾಗಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ, ಭೂ ಸ್ವಾಧೀನ ವಿರೋಧಿಸುತ್ತಿರುವ ಎಲ್ಲರ ಅಹವಾಲುಗಳನ್ನು ಪರಿಗಣಿಸಲು ಕ್ರಮ ಕೈಗೊಳ್ಳುವುದಾಗಿ, ಸಮಿತಿ ತನ್ನ ವರದಿ ನೀಡಿ ಮುಂದಿನ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳುವವರೆಗೆ ಯಾವುದೇ ರೀತಿಯ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರು ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಬೈರಮಂಗಲ -ಕಂಚುಗಾರನಹಳ್ಳಿ ಭೂ ಹಿತರಕ್ಷಣಾ ಸಮಿತಿ ಮುಖಂಡರಿಗೆ ಭರವಸೆ ನೀಡಿದ್ದರು. ಅಲ್ಲಿನ ಕೃಷಿ ಭೂಮಿ ಹಚ್ಚ ಹಸಿರಿನ ನೀರಾವರಿ ಸಮೃದ್ಧವಾಗಿದ್ದು ಯಾರೂ ಭೂಮಿ ಮಾರಿಕೊಳ್ಳದೇ ಕಾಪಾಡಿಕೊಳ್ಳಿ, ನಿಮ್ಮ ಭೂಮಿ ರಕ್ಷಣೆಗೆ ನನ್ನ ಬೆಂಬಲ ಇದೆ ಎಂದು ಸ್ಪಷ್ಟವಾಗಿ ಹೇಳಿದ್ದರು.
ಆದರೆ ಇದಾಗಿ ಒಂದು ತಿಂಗಳಾದರೂ ಸಮಿತಿ ಕಾರ್ಯಾರಂಭ ಮಾಡಲಿಲ್ಲ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧೀಕಾರದವರು ತೋಳ್ಬಲದ ರಿಯಲ್ ಎಸ್ಟೇಟ್ ದಲ್ಲಾಳಿಗಳ ಮೂಲಕ, ಈ ಎರಡೂ ಪಂಚಾಯಿತಿ ಗಳ ಕುಟುಂಬಗಳ ಸದಸ್ಯರ ನಡುವೆ ಸಿವಿಲ್ ವ್ಯಾಜ್ಯಗಳನ್ನು ಹುಟ್ಟು ಹಾಕುವ ಮೂಲಕ, ಸುಳ್ಳು ಕ್ರಿಮಿನಲ್ ಕೇಸ್ ಗಳ ಬೆದರಿಕೆ ಮೂಲಕ, ಕಂದಾಯ ಇಲಾಖೆ ಭ್ರಷ್ಟ ಅಧಿಕಾರಿಗಳ ಮೂಲಕ ಪಹಣಿಯ ವಿಸ್ತೀರ್ಣ ಮತ್ತು ಎಂ ಆರ್ ಗಳಲ್ಲಿ ತಿದ್ದುಪಡಿ ಮಾಡಿಸುವ ಮೂಲಕ, ಹೀಗೆ ವಿವಿಧ ರೀತಿಯ ದಬ್ಬಾಳಿಕೆ, ದೌರ್ಜನ್ಯ, ದಮನ ತಂತ್ರಗಳ ಮೂಲಕ ಭೂ ಸ್ವಾಧೀನಕ್ಕೆ ಬಲವಂತವಾಗಿ ಒಪ್ಪಿಗೆ ಪಡೆದು, ಭೂ ಸ್ವಾಧೀನ ಪರಿಹಾರ ವಿತರಣೆಯನ್ನು ಮುಂದುವರೆಸಿತು. ಹೋರಾಡುತ್ತಿರುವ ರೈತರ ಮನೋಬಲ ಕುಗ್ಗಿಸುವ ಕೆಲಸವನ್ನು ಕೂಡ ಮಾಡಿದ್ದು ಈಗಾಗಲೇ ಬಿಡದಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ತಮ್ಮ ಕೃಷಿ ಭೂಮಿ ಉಳಿಸಿಕೊಳ್ಳಲು ಬೈರಮಂಗಲ -ಕಂಚುಗಾರನಹಳ್ಳಿ ರೈತರು ಕಳೆದ ಐದು ದಿನಗಳಿಂದ ಬೈರಮಂಗಲ ವೃತ್ತದಲ್ಲಿ ಸರಣಿ ಉಪವಾಸ ಹಾಗೂ ಬೃಹತ್ ರಸ್ತೆ ತಡೆ ಪ್ರತಿಭಟನೆಯನ್ನು ನಡೆಸುತ್ತಿದ್ದರು.
ರಾಜ್ಯ ಸರ್ಕಾರ ಈ ರೈತರ ನೈಜ ಆತಂಕವನ್ನು ನಿವಾರಿಸಿ ,ಈ ಹಿಂದೆ ಬಿಡದಿ ರೈತರಿಗೆ ಹಾಗೂ ಕರ್ನಾಟಕ ಹೈಕೋರ್ಟ್ ಗೆ ನೀಡಿದ್ದ ಭರವಸೆಯನ್ನು ಜಾರಿ ಮಾಡುವ ಬಗ್ಗೆ ಖಚಿತ ವಿಶ್ವಾಸ ಉಂಟಾಗುವAತೆ ರೈತರ ಮನ ಒಲಿಸುವ ಮೂಲಕ ರಸ್ತೆ ತಡೆ ತೆರವು ಮಾಡುವ ವಿಧಾನದ ಬದಲು, ಸುಮಾರು ಐದು ನೂರಕ್ಕೂ ಹೆಚ್ಚು ಪೊಲೀಸ್ ಬಲವನ್ನು ಬಳಸಿ ,ಮಹಿಳೆಯರು ಎಂದು ಪರಿಗಣಿಸದೇ ಪುರುಷ ಪೊಲೀಸ್ ರ ಮೂಲಕವೇ ಎಳೆದಾಡಿ ಬಲವಂತವಾಗಿ ವಶಕ್ಕೆ ತೆಗೆದುಕೊಂಡು ಅಮಾನುಷವಾಗಿ ವರ್ತಿಸಿದೆ. ರಸ್ತೆ ತಡೆ ತೆರುವು ಮಾಡಿಸುವುದಕ್ಕಷ್ಟೇ ಸೀಮಿತ ಗೊಳ್ಳದೇ ಗ್ರಾಮ ಗ್ರಾಮಗಳಿಗೆ ಓಡಾಡಿ ಸಿಕ್ಕ ಸಿಕ್ಕವರನ್ನು ಬಂಧಿಸಲು, ಆ ಮೂಲಕ ಗ್ರಾಮಗಳಲ್ಲಿ ಪೊಲೀಸ್ ಭೀತಿ ಹುಟ್ಟಿಸಲು ಪ್ರಯತ್ನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಹಕ್ಕೊತ್ತಾಯ ಗಳನ್ನು ಈಡೇರಿಸಬೇಕು. ಶಾಂತಿಯುತ ಅನಿರ್ದಿಷ್ಟ ಧರಣಿ ನಡೆಸುತ್ತಿರುವ ಬೈರಮಂಗಲ ವೃತ್ತದ ಪ್ರತಿಭಟನಾ ಧರಣಿ ಸ್ಥಳದಲ್ಲಿ ರೈತರ ಪ್ರತಿಭಟನಾ ಹಕ್ಕಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ರಕ್ಷಣೆ ಒದಗಿಸಬೇಕು, ರೈತರ ಮೇಲೆ ದೌರ್ಜನ್ಯ ನಡೆಸಿರುವ ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ಹೇಳಿದ್ದಾರೆ.