
ಪಿರಿಯಾಪಟ್ಟಣ : ನಮ್ಮ ಜಮೀನಿಗೆ ಪ್ರವೇಶ ಮಾಡಲು ಬಿಡದೆ ಕೆಲವು ವ್ಯಕ್ತಿಗಳು ನಮಗೆ ತೊಂದರೆ ನೀಡುತ್ತಿದ್ದಾರೆ ಅವರ ವಿರುದ್ಧ ಕ್ರಮ ಕೈಕೊಳ್ಳಬೇಕು ಎಂದು ಜಮೀನಿನ ಮಾಲೀಕ ಮೋಹನನ್ ಆರೋಪಿಸಿದ್ದಾರೆ.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನನ್ನ ತಂದೆ ಗೋವಿಂದಯ್ಯ ರವರು ತಾಲೂಕಿನ ಅಳಲೂರು ಗ್ರಾಮದವರಾಗಿದ್ದು ಇವರಿಗೆ 1978ರಲ್ಲಿ ಸರ್ವೇ ಸಂಖ್ಯೆ 49 ರಲ್ಲಿ 2 ಎಕರೆ 10 ಗುಂಟೆ ಜಮೀನು ಮಂಜೂರಾಗಿರುತ್ತದೆ. ಇದರಂತೆ ತಹಸೀಲ್ದಾರ್ ರವರಿಂದ ಖಾತೆಯನ್ನು ಕೂಡ ಮಾಡಿಸಿಕೊಂಡಿದ್ದೇವೆ. ನಮ್ಮ ತಂದೆಯವರು ಅನಾರೋಗ್ಯವಾದ ಕಾರಣ ಈ ಜಮೀನನ್ನು ನೋಡಿಕೊಳ್ಳುವಂತೆ ರಾಧಮ್ಮ ಎಂಬ ಮಹಿಳೆಗೆ ಜವಾಬ್ದಾರಿ ವಹಿಸಿದ್ದರು ಆದರೆ ಈಗ ನಮಗೆ ತೊಂದರೆ ನೀಡುತ್ತಿದ್ದಾರೆ ಈ ವಿಷಯವಾಗಿ ನಾನು ನ್ಯಾಯಾಲಯದಲ್ಲಿ ದಾವೆ ಹೂಡಿ ನನಗೆ ಜಮೀನಿಗೆ ಪ್ರವೇಶ ಮಾಡಲು ತೊಂದರೆ ನೀಡದಂತೆ ಆದೇಶ ತಂದಿದ್ದೇನೆ. ಆದ್ದರಿಂದ ನನಗೆ ಸೇರಬೇಕಾದ ಜಮೀನಿಗೆ ನಾನು ಪ್ರವೇಶ ಮಾಡಲು ಹೋದರೆ ಸ್ಥಳೀಯರಾದ ವಿಕ್ರಂ ರಾಜ್, ರಮೇಶ್, ನಿಶಾಂತ್, ಪ್ರಶಾಂತ್, ಅನಿಲ್, ರಾಜೀವ್ ಸೇರಿದಂತೆ ಇತರರು ನನ್ನ ಮತ್ತು ಕುಟುಂಬವನ್ನು ಹೆದರಿಸಿ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು ನನಗೆ ನ್ಯಾಯಾಂಗವು ಕಾನೂನಿನ ಮೂಲಕ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೆ.ಕಾಂತರಾಜ್ ಮಾತನಾಡಿ ಭೀಮ್ ಆರ್ಮಿ ಸೇರಿದಂತೆ ಸಾಮಾಜಿಕ ಜವಾಬ್ದಾರಿ ಹೊತ್ತ ಸಂಘಟನೆಗಳು ನೊಂದವರ ಪರವಾಗಿ ನಿಂತು ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದೆ ಇಂತಹ ಸಂದರ್ಭದಲ್ಲಿ ಮಾಜಿ ಸೈನಿಕರಾದ ವಿಕ್ರಮ್ ರಾಜ್ ರವರು ಭೀಮ್ ಆರ್ಮಿ ಸಂಘಟನೆಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯವಾದದ್ದು. ಇದೇ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದರೆ ಮಾನನಷ್ಟ ಮೊಕ್ಕದಮೆ ದಾಖಲಿಸಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಮಂಜು ಆಯಿತನಳ್ಳಿ, ಭೀಮ್ ಆರ್ಮಿ ಗಿರೀಶ್, ಷರೀಫ್, ಸತೀಶ್, ಪ್ರವೀಣ್, ಜಮೀನಿನ ಮಾಲೀಕರಾದ ಸ್ಮಿತಾ, ಸುಲೋಚನಾ, ದೀಪಾ ಹಾಜರಿದ್ದರು.