
ಮೂಲಭೂತ ಸೌಕರ್ಯಗಳ ಕೊರತೆ – ಕೆಂಚನಹಳ್ಳಿ ಗ್ರಾಮಸ್ಥರ ಅಸಮಾಧಾನ
ಎಚ್.ಡಿ.ಕೋಟೆ : ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಎಸ್ಸಿ -ಎಸ್ಟಿ ಸಮುದಾಯದ ಜೊತೆ ಶಾಸಕರು ಹಾಗೂ ಅಧಿಕಾರಿಗಳ ನಡುವಿನ ಸಮಾಲೋಚನಾ ಸಭೆಯಲ್ಲಿ ದೂರುಗಳ ಸರಮಾಲೆಯೇ ಕೇಳಿಬಂತು. ತಾಲೂಕಿನ ವಿವಿಧ ಭಾಗಗಳಿಂದ ಸಮಸ್ಯೆಗಳನ್ನು ಹೊತ್ತು ತಂದ ಜನರು, ಇಷ್ಟು ದಿನ ತಾವು ಅನುಭವಿಸುತ್ತಿರುವ, ಸಮಸ್ಯೆಗಳು ಹಾಗು ತೊಂದರೆಗಳನ್ನು ಶಾಸಕ ಅನಿಲ್ ಚಿಕ್ಕಮಾದು ಅವರ ಗಮನಕ್ಕೆ ತಂದರು.
ಸಭೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸದ್ದು ಮಾಡಿತ್ತು. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಹೂಳು ತುಂಬಿರುವ ಹಿನ್ನೆಲೆ ಸುಲಲಿತವಾಗಿ ನೀರು ಹರಿದುಹೋಗುತ್ತಿಲ್ಲ. ಇಷ್ಟು ವರ್ಷಗಳು ಕಳೆದರೂ ಸ್ಮಶಾನಕ್ಕೆ ಜಾಗ ಇಲ್ಲ. ಕಿಲೋಮೀಟರ್ ಗಟ್ಟಲೆ ಶವ ಹೊತ್ತುಕೊಂಡು ಹೋಗಿ ಮಣ್ಣು ಮಾಡಬೇಕು. ಸರ್ಕಾರಿ ಶಾಲೆ ಮುಚ್ಚಲಾಗಿದೆ. ಬಸ್ ವ್ಯವಸ್ಥೆ ಸರಿಯಿಲ್ಲ. ಕಬಿನಿ ಜಲಾಶಯ ಮುಳುಗಡೆ ಸಂತ್ರಸ್ತರಿಗೆ ಇನ್ನೂ ಸಾಗುವಳಿ ಪತ್ರ ಸಿಕ್ಕಿಲ್ಲ. ಸರ್ಕಾರವಿದ್ದರೂ ಯಾಕೆ ನಮಗೆ ಸಾಗುವಳಿ ಪತ್ರ ಕೊಡುತ್ತಿಲ್ಲ. ಹೀಗೆ ಶಾಸಕ ಅನಿಲ್ ಚಿಕ್ಕಮಾದು ಮುಂದೆ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು.
ತಾಲೂಕಿನ ನೇರಳೆ ಗ್ರಾಮದಲ್ಲಿ ಅಂಬೇಡ್ಕರ್ ಭವನಕ್ಕೆ ಗುದ್ದಲಿ ಪೂಜೆ ಮಾಡಿ ವರ್ಷಗಳೇ ಕಳೆದರೂ ಕೆಲಸ ಪ್ರಾರಂಭವಾಗಿಲ್ಲ. ನಂಜನಾಯಕನ ಕಾಲೋನಿಯಲ್ಲಿ ಸ್ಮಶಾನ ಜಾಗ ಇಲ್ಲ, ಬೆಳಗನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಗುರುತಿಸಿರುವ ಜಾಗ ಒತ್ತುವರಿಯಾಗಿದೆ,
ಹುಲಿಕುರ ಗ್ರಾಮದಲ್ಲಿ ಸ್ಮಶಾನ ಇಲ್ಲದೆ ಹೊಳೆಯ ಪಕ್ಕದಲ್ಲಿ ಶವ ಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟ ರಸ್ತೆಯಿಂದ ಬಸ್ ಸಂಪರ್ಕ ಕಡಿತಗೊಂಡಿದೆ. ರಾಜೇಗೌಡನಹುಂಡಿ ಗ್ರಾಮದಲ್ಲಿ ಸ್ಮಶಾನವೇ ಇಲ್ಲ, ಹೀಗೆ ಆಯಾಯ ಗ್ರಾಮಗಳಿಂದ ಆಗಮಿಸಿದ ಜನರು ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಎಲ್ಲರ ಮುಂದೆ ಅನಾವರಣಗೊಳಿಸಿದರು. ಜನರ ಅಹವಾಲು ಆಲಿಸಿದ ಶಾಸಕ ಅನಿಲ್ ಚಿಕ್ಕಮಾದು, ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
(ಕೋಟ್)
ಶಾಸಕರ ವಿರುದ್ಧ ಅಸಮಾಧಾನ :
ಕಬಿನಿ ಅಣೆಕಟ್ಟಿಗಾಗಿ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿರುವ ಕೆಂಚನಹಳ್ಳಿ ಗ್ರಾಮಸ್ಥರು, ಶಾಸಕರ ಮುಂದೆ ತಮ್ಮ ಅಸಮಾಧಾನ ಹೊರಹಾಕಿದರು. 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಇಲ್ಲಿಯವರೆಗೆ ಜಮೀನಿಗೆ ಸಾಗುವಳಿ ಪತ್ರ ಸಿಕ್ಕಿಲ್ಲ. ನೀವೇ ಎರಡು ಬಾರಿ ಶಾಸಕರಾಗಿದ್ದೀರಿ, ಸಮಸ್ಯೆ ಮಾತ್ರ ಬಗೆಹರಿಸಿಲ್ಲ. ಇನ್ನು ಎಷ್ಟು ವರ್ಷ ಬೇಕು ಎಂದು ಶಾಸಕರನ್ನು ಪ್ರಶ್ನೆ ಮಾಡಿದರು. ಈ ವೇಳೆ ತಾಳ್ಮೆ ಕಳೆದುಕೊಂಡ ಶಾಸಕ ಅನಿಲ್ ಚಿಕ್ಕಮಾದು, ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಾನು ಶಾಸಕನಾಗಿರಬಹುದು. ಆದರೆ ಸರ್ಕಾರವಿದೆ. ಮುಖ್ಯಮಂತ್ರಿಗಳು ಇದ್ದಾರೆ. ಅಧಿಕಾರಿಗಳು ಇದ್ದಾರೆ. ದಯವಿಟ್ಟು. ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಹೆಚ್ ಡಿ ಕೋಟೆ ತಹಶೀಲ್ದಾರ್ ಶ್ರೀನಿವಾಸ್, ಸರಗೂರು ತಹಸೀಲ್ದಾರ್ ಮೋಹನ್ ಕುಮಾರಿ,ತಾ.ಪಂ.ಇಒ ಪ್ರೇಮ ಕುಮಾರ್, ರವಿಚಂದ್ರ, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಚಲುವರಾಜು, ಚಾಮರಾಜು, ಆರಕ್ಷಕ ಉಪ ನಿರೀಕ್ಷಕ ಚಿಕ್ಕನಾಯಕ, ಡಿ. ಎಸ್.ಎಸ್. ಜಿಲ್ಲಾ ಸಂಚಾಲಕರು ಬೆಟ್ಟಯ್ಯ ಕೋಟೆ, ನಿಂಗರಾಜು ಹೆಗ್ಗನೂರು, ಕೋಟೆ ಮತ್ತು ಸರಗೂರು ತಾಲೂಕಿನ ಎಸ್.ಸಿ, ಎಸ್. ಟಿ. ಸಮುದಾಯದ ಮುಖಂಡರು, ಸಾರ್ವಜನಿಕರು ಇದ್ದರು.