
ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾದ ನಾಲ್ಕನೇ ದಿನವಾದ ಬುಧವಾರ ದಸರಾ ಯುವಕವಿಗೋಷ್ಠಿ ನಡೆಯಿತು.
ನಗರದ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಯುವ ಕವಿಗೋಷ್ಠಿಯಲ್ಲಿ 39 ಮಂದಿ ಕವಿತೆ ವಾಚನ ಮಾಡಿದರು. ಲಿಂಗತ್ವ ಅಲ್ಪಸಂಖ್ಯಾತರು, ವಿಶೇಷ ಚೇತನರು, ಕೂಲಿಕಾರ್ಮಿಕರು ಕವನ ವಾಚಿಸಿದ್ದು ವಿಶೇಷವಾಗಿತ್ತು.
ಭ್ರಷ್ಟಾಚಾರ, ನಿರುದ್ಯೋಗ, ರಾಜಕೀಯ, ಧರ್ಮದ, ಕಾರುಣ್ಯ, ಪ್ರಕೃತಿ ಸಂಬAಧಿಸಿದAತೆ ಕವಿತೆಗಳು ಪ್ರೇಕ್ಷಕರ ಚಪ್ಪಾಳೆಗೆ ಪಾತ್ರವಾದವು.
ಕಾರ್ಯಕ್ರಮ ಉದ್ಘಾಟಿಸಿದ ಕವಯಿತ್ರಿ ಡಾ.ಕೆ.ಷರಿಫಾ ಮಾತನಾಡಿ, ಇಂದಿನ ಯುವ ಪೀಳಿಗೆ ಸಮಾಜದ ಚೈತನ್ಯ ಶಕ್ತಿಯಾಗಿದ್ದಾರೆ. ಸಾಮಾಜಿಕ ಪಿಡುಗು, ಭ್ರಷ್ಟಾಚಾರ, ಅಸಮಾನತೆ, ಅನ್ಯಾಯವನ್ನು ಪ್ರಶ್ನಿಸುವ ಕಾವ್ಯ ರಚಿಸುವ ಮನೋಭಾವ ಹೊಂದಿದ್ದಾರೆ ಎಂದರು.
ನಿರುದ್ಯೋಗ, ಕೆಲಸದ ಅಭದ್ರತೆ, ಸಾಮಾಜಿಕ ಪಿಡುಗು ಅಸಮಾನತೆ, ಕೃಷಿ ಸಂಕಷ್ಟ, ಕೋಮುವಾದ, ಮಾನಸಿಕ ಒತ್ತಡ ಯುವಕರನ್ನು ಪೀಡಿಸುತ್ತಿದೆ. ಇದರಿಂದಾಗಿ ಅನೇಕರು ಮಾದಕ ವ್ಯಸನಿಗಳಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೋಮುವಾದ, ಕೇಸರೀಕರಣ ಪಠ್ಯಪುಸ್ತಕ ಸೇರುತ್ತಿದೆ. ಕೋಮುವಾದದಿಂದ ಮಕ್ಕಳು ಏನನ್ನು ಕಲಿಯುತ್ತಾರೆ. ಇದೀಗ ಎಐ ಬಳಕೆ ಜೋರಾಗಿದೆ. ಆದರೆ, ಇದರಿಂದ ವಾಸ್ತವತೆ ಮರೆಯಾಗುತ್ತಿದೆ. ಯುವಕರು ಜಾಗೃತರಾಗುವ ಮೂಲಕ ಉತ್ತಮ ಸಮಾಜ ಕಟ್ಟಬೇಕು ಎಂದರು.
ಯುವ ಜನಾಂಗ ಸಾಮಾಜಿಕ ಜಾಲತಾಣಗಳ ಮೂಲಕ ಮುಖಾಮುಖಿಯಾಗುತ್ತಿದ್ದಾರೆ. ಅನ್ಯಾಯವನ್ನು ಪ್ರತಿಭಟಿಸಲು ಜೆನ್ ಜಿ ಯುವಕರು ಮುಂದಾಗಿದ್ದಾರೆ. ಹೋರಾಟದ ರೂಪಕಗಳು ಬದಲಾವಣೆಯಾಗುತ್ತಿದೆ ಎಂದು ಹೇಳಿದರು.
ಗಾಂಧಿ, ನೆಹರು, ಅಂಬೇಡ್ಕರ್ ಇಂದಿಗೂ ಪ್ರಸ್ತುತರಾಗಿದ್ದು, ಅವರು ಎಲ್ಲರ ಹೃದಯದಲ್ಲಿದ್ದಾರೆ. ನಮ್ಮ ಸಮಸ್ಯೆಗಳಿಗೆ ಪ್ರಶ್ನಿಸುವ ಮೂಲಕ ಉತ್ತರ ಪಡೆಯಬೇಕು. ಬರಹ ಪ್ರಭಲವಾದ ಅಸ್ತçವಾಗಿದ್ದು, ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
ಬರವಣಿಗೆಯು ಬದ್ಧತೆಯಿಂದ ಕೂಡಿರಬೇಕು. ಕಾವ್ಯದಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಉದ್ಯೋಗದ ಜೊತೆಗೆ ಕಾವ್ಯವನ್ನು ಸಶಕ್ತವಾಗಿ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಕವಿ ಡಾ.ಸತ್ಯನಂದಾ ಪಾತ್ರೋಟ ಮಾತನಾಡಿ, ಯುವ ಕವಿಗಳು ಕವಿತೆ ಕಟ್ಟುವ ಮೂಲಕ ನಾಡು ಕಟ್ಟುವ ಕೆಲಸ ಮಾಡಬೇಕು. ಜಾತಿ, ಮತ, ಧರ್ಮದ ಸ್ವಾರ್ಥವಿಲ್ಲದೆ ಕವಿತೆ ಕಟ್ಟುವ ತಾಯಿಯ ಕರುಳಿರಬೇಕು. ಪ್ರಶಸ್ತಿ, ಪ್ರಚಾರಕ್ಕಾಗಿ ಕವಿತೆ ಬರೆಯಬೇಡಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕವಿ ಹೆಚ್ ಗೋವಿಂದಯ್ಯ, ಸಿನಿಮಾ ಗೀತಾ ರಚನಾಕಾರ ಹೃದಯ ಶಿವ, ನಗರ ಪಾಲಿಕೆ ಆಯುಕ್ತ ದಾಸೇಗೌಡ, ದಸರಾ ಕವಿಗೋಷ್ಠಿ ಕಾರ್ಯದರ್ಶಿ ಆನಂದ, ಕನ್ನಡ ಪ್ರಾಧ್ಯಾಪಕರಾದ ತ್ರಿವೇಣಿ, ಉಮೇಶ ದೇವಿನಹಳ್ಳಿ, ಪ್ರೋ.ನಂಜಯ್ಯ ಹೊಂಗನೂರು ಉಪಸ್ಥಿತರಿದ್ದರು