Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಕ್ಕಳ ದಸರಾಗೆ ಸಚಿವ ಮಧು ಬಂಗಾರಪ್ಪಚಾಲನೆ


ಸಾಧನೆಗೈದ ಮಕ್ಕಳಿಗೆ ಸಚಿವರಿಂದ ಸನ್ಮಾನ: ನೃತ್ಯ ಪ್ರದರ್ಶನ, ಕಲಾಥಾನ್ ಮೆರವಣಿಗೆ
ಮೈಸೂರು;
ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ಬುಧವಾರ ನಡೆದ ಮಕ್ಕಳ ದಸರಾಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು,
ದಸರಾ ಮಹೋತ್ಸವದ ಅಂಗವಾಗಿ ಸುಮಾರು 6,500 ಮಕ್ಕಳು ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ವೇದಿಕೆಗೆ ಬರುವ ಮುನ್ನವೇ ಮಕ್ಕಳು ರಂಗೋಲಿ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ನಾಡಹಬ್ಬ ದಸರಾವನ್ನು ಮಕ್ಕಳು ತಮ್ಮದೇ ಆದ ವಿಭಿನ್ನ ದೃಷ್ಟಿಕೋನದಲ್ಲಿ ಚಿತ್ರಗಳ ಮೂಲಕ ಅಭಿವ್ಯಕ್ತಿಪಡಿಸಿದ್ದಾರೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 1.16 ಕೋಟಿ ಮಕ್ಕಳು ನನ್ನ ಇಲಾಖೆಯ ವ್ಯಾಪ್ತಿಗೆ ಬರುತ್ತಾರೆ. ಇಷ್ಟು ದೊಡ್ಡ ಸಂಖ್ಯೆಯ ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ನನ್ನ ಪಾಲಿನ ಭಾಗ್ಯ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದರು.
ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಮೈಸೂರು ದಸರಾ ಮಹೋತ್ಸವ ನಡೆಯುತ್ತಿರುವುದು ವಿಶೇಷವಾಗಿದೆ. ಶ್ರೀಗಳ ಆಶೀರ್ವಾದ ಹಾಗೂ ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ದೂರವಾಗಿ, ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಸಾಧನೆಗೈದ ಮಕ್ಕಳಿಗೆ ಸಚಿವರಿಂದ ಸನ್ಮಾನ: ಧಾರಾವಾಹಿಯಲ್ಲಿ ಕಲಾವಿದೆ ಬೆಂಗಳೂರಿನ ಕು. ಟಿ.ಬಿ ರಚನಾ, ಕ್ರೀಡಾಪಟು ಮೈಸೂರಿನ ಮೇದಿನಿ ಗ್ರಾಮದ ತನುಶ್ರೀ ಹಾಗೂ ವಿಶೇಷ ಚೇತನ ಕ್ರೀಡಾಪಟು ಧಾರವಾಡದ ವಿನಾಯಕ ಹಳ್ಳಿಕೇರಿ ಅವರಿಗೆ ಸಚಿವ ಮಧು ಬಂಗಾರಪ್ಪ ಅವರು ಸನ್ಮಾನಿಸಿದರು.
ಕು.ರಚನಾರಿಂದ ನೃತ್ಯ ಪ್ರದರ್ಶನ : ಬೆಂಗಳೂರಿನ ಮೂಲದ ಧಾರಾವಾಹಿ ಕಲಾವಿದೆ ಕು.ಟಿ.ಬಿ ರಚನಾ, ಅವರು ಓಂ ನಮಃ ಶಿವಾಯ… ಓಂ ನಮಃ ಶಿವಾಯ… ಹರಹರ ಶಂಭೊ… ಶಿವ ಶಂಭೊ… ಸ್ವಯಂಭೊ… ಹಾಗೂ ನಗರವಿ ಶಾರದ ನಟರಾಜು ಬಂದನು… ಹಾಡುಗಳಿಗೆ ನೃತ್ಯ ಮಾಡಿ ಸಭಿಕರನ್ನು ರಂಜಿಸಿದರು.
ಕಲಾಥಾನ್ ಮೆರವಣಿಗೆ : ವಿವಿಧ ವೇಷಭೂಷಣ ಕಲಾಪ್ರಕಾರಗಳೊಂದಿಗೆ 1000 ಮಕ್ಕಳೊಂದಿಗೆ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಡಿ.ದೇವರಾಜು ಅರಸು ರಸ್ತೆ ಮಾರ್ಗವಾಗಿ ಕಲಾಮಂದಿರದ ವರಗೆ ಕಲಾಥಾನ್ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಅರುಣ್ ಕುಮಾರ್, ಮೈಸೂರು ದಸರಾ ಮಹೋತ್ಸವದ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಅಧ್ಯಕ್ಷೆ ಚೂಡಾಮಣಿ, ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಅಮಿತ್, ಉಪ ಕಾರ್ಯದರ್ಶಿ ಸವಿತಾ, ಉಪ ನಿರ್ದೇಶಕ ಉದಯ್ ಕುಮಾರ್, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.