
ಮೈಸೂರು; ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಗರಕ್ಕೆ ಆಗಮಿಸಿದ ಸುಮಾರು 10 ಲಕ್ಷಕ್ಕೂ ಅಧಿಕ ಪ್ರವಾಸಿಗರಿಗೆ ಸ್ವಚ್ಛ ಹಾಗೂ ಸುಂದರ ವಾತಾವರಣವನ್ನು ಕಲ್ಪಿಸುವಲ್ಲಿ ಪೌರಕಾರ್ಮಿಕರು, ಒಳಚರಂಡಿ (ಯುಜಿಡಿ) ಕಾರ್ಮಿಕರು ಹಾಗೂ ವಾಹನ ಚಾಲಕರ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ದಸರಾ ಮಹೋತ್ಸವದ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸ್ವಚ್ಛತಾ ಸೇನಾನಿಗಳಿಗಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಭೋಜನಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ದಸರಾ ಮಹೋತ್ಸವವು ವಿಶ್ವದ ಗಮನ ಸೆಳೆಯುವ ಪ್ರಮುಖ ಸಾಂಸ್ಕöÈತಿಕ ಉತ್ಸವವಾಗಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ನಗರಕ್ಕೆ ಆಗಮಿಸುವ್ಯದರಿಂದ, ನಗರದ ಸ್ವಚ್ಛತೆ, ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವುದು ದೊಡ್ಡ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ನಮ್ಮ ಪೌರಕಾರ್ಮಿಕರು, ಯುಜಿಡಿ ಸಿಬ್ಬಂದಿ ಹಾಗೂ ವಾಹನ ಚಾಲಕರು ಹಗಲಿರುಳು ಶ್ರಮಿಸುವ ಮೂಲಕ ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ನಿಸ್ವಾರ್ಥ ಸೇವೆ ಮತ್ತು ಸಮರ್ಪಣಾ ಮನೋಭಾವಕ್ಕೆ ಅಭಿನಂದನೆ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಪೌರಕಾರ್ಮಿಕರು ಕೇವಲ ಸ್ವಚ್ಛತಾ ಸೇನಾನಿಗಳಲ್ಲ, ನಗರದ ಆರೋಗ್ಯ ಸೇನಾನಿಗಳು.ನಗರವನ್ನು ಸ್ವಚ್ಛವಾಗಿಡುವ ಮೂಲಕ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ಶ್ರಮದಿಂದಲೇ ಮೈಸೂರು ನಗರವು ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಅವರ ಸೇವೆಯನ್ನು ಗೌರವಿಸುವುದು ಹಾಗೂ ಅವರೊಂದಿಗೆ ಆತ್ಮೀಯತೆಯಿಂದ ಬೆರೆಯುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಉಪಾಹಾರ ಒದಗಿಸುವ ಕಾರ್ಯಕ್ರಮವನ್ನು ಆರಂಭಿಸಿರುವುದರ ಜೊತೆಗೆ, ಪೌರಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಅವರನ್ನು ಖಾಯಂಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಕಾರ್ಮಿಕರ ಶ್ರಮಕ್ಕೆ ಗೌರವ ನೀಡುವುದು, ಅವರ ಬದುಕಿನಲ್ಲಿ ಭದ್ರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಸರ್ಕಾರದ ಬದ್ಧತೆಯಾಗಿದೆ. ನಗರದ ಸ್ವಚ್ಛತೆಗಾಗಿ ಶ್ರಮಿಸುವ ಕಾರ್ಮಿಕರ ಸೇವೆಯನ್ನು ಗುರುತಿಸಿ ಗೌರವಿಸುವುದು ಸಮಾಜದ ಜವಾಬ್ದಾರಿಯೂ ಆಗಿದೆ ಎಂದು ಹೇಳಿದರು.
ದಸರಾ ಮಹೋತ್ಸವದ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರು, ಯುಜಿಡಿ ಕಾರ್ಮಿಕರು ಹಾಗೂ ವಾಹನ ಚಾಲಕರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಬಳಿಕ ಸಚಿವರು ಪೌರಕಾರ್ಮಿಕರೊಂದಿಗೆ ಭೋಜನ ಸವಿದು ಅವರೊಂದಿಗೆ ಆತ್ಮೀಯವಾಗಿ ಸಮಯ ಕಳೆದರು.
ಕಾರ್ಯಕ್ರಮದಲ್ಲಿ ಶಾಸಕ ಕೆ. ಹರೀಶ್ ಗೌಡ, ಮಾಜಿ ಶಾಸಕ ಸೋಮಶೇಖರ್, ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಮಾಜಿ ಮೇಯರ್ ನಾರಾಯಣ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಜಿಲ್ಲಾಧಿಕಾರಿ ಜಿ. ಲಕ್ಷಿ÷್ಮÃಕಾಂತ ರೆಡ್ಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.