
ಮೈಸೂರು; ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಸಾಗುತ್ತಿವೆ. ಭಾನುವಾರ ದಸರಾ ಗಜಪಡೆಯ ಎರಡನೇ ಆನೆಗಳ ತಂಡ ಕಾಡಿನಿಂದ ಅರಮನೆ ನಗರಿ ಮೈಸೂರಿಗೆ ಆಗಮಿಸಿದವು. ಕಾಡಿನ ವಿವಿಧ ಶಿಬಿರಗಳಿಂದ ಲಾರಿಗಳಲ್ಲಿ ಮೈಸೂರಿನ ಅಂಬಾವಿಲಾಸ ಅರಮನೆಗೆ ಆಗಮಿಸಿದ ಎರಡನೇ ತಂಡ ಸುಗ್ರೀವ, ಚೈತ್ರ, ರೂಪ ಹಾಗೂ ಮತ್ತೆರಡು ಆನೆಗಳನ್ನು ಸಾಲಾಗಿ ನಿಲ್ಲಿಸಿ, ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸುವ ಮೂಲಕ ಬರಮಾಡಿಕೊಳ್ಳಲಾಯಿತು. ಬಳಿಕ ಮಾವುತರು, ಕಾವಾಡಿಗಳು ತಮ್ಮ ಆನೆಗಳೊಂದಿಗೆ ಈಗಾಗಲೇ ಬಿಡಾರ ಹೂಡಿರುವ ಆನೆಗಳ ಶೆಡ್‌ಗೆ ತೆರಳಿ ವಾಸ್ತವ್ಯ ಹೂಡಿದರು. ಅರಮನೆಯ ಅಂಗಳದಲ್ಲಿ ಆನೆಗಳಿಗೆ ಇಂದು ಸ್ನಾನ ಮಾಡಿಸಲಾಯಿತು. ಆನೆಗಳನ್ನು ನೋಡಿ ಕಣ್ತುಂಬಿಕೊಳ್ಳಲು ಜನಸಮೂಹವೇ ಹರಿದು ಬಂದಿತ್ತು.