Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಹಿಳಾ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದ್ದೇ ಬಸವಾದಿ ಪ್ರಮಥರು:ಸಚಿವ ಈಶ್ವರ ಖಂಡ್ರೆ

*ಸಾಮಾಜಿಕ ನ್ಯಾಯಕ್ಕೆ ನಡೆದ ಏಕೈಕ ಕ್ರಾಂತಿ ಕಲ್ಯಾಣ ಕಾಂತ್ರಿ

ಕೆ.ಆರ್.ನಗರ, ಅ.28: ಲೋಕಕಲ್ಯಾಣಕ್ಕಾಗಿ, ಸಮಸಮಾಜಕ್ಕಾಗಿ, ಸಾಮಾಜಿಕ ನ್ಯಾಯಕ್ಕಾಗಿ ಜಗತ್ತಿನಲ್ಲಿ ಯಾವುದಾದರೂ ಕ್ರಾಂತಿ ನಡೆದಿದ್ದರೆ ಅದು ಕಲ್ಯಾಣದ ಕ್ರಾಂತಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. 

ವೀರಶೈವ ಲಿಂಗಾಯತ ಮಹಾಸಭಾ ಮತ್ತು ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ಕೆ.ಆರ್.ನಗರದಲ್ಲಿ ಆಯೋಜಿಸಲಾಗಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರು ಈ ಜಗತ್ತಿನ ಬೆಳಕು ಎಂದು ಹೇಳಿದರು.

ಕಾಯಕವೇ ಕೈಲಾಸ ಎಂಬ ಮಂತ್ರವನ್ನು ಬಸವಣ್ಣನವರು ನಮಗೆ ನೀಡಿದ್ದಾರೆ. ದುಡಿಯುವ ಕೈಗೆ ಕೆಲಸ ಕೊಡಬೇಕು. ವೃತ್ತಿ ಯಾವುದೇ ಆದರೂ ಅದನ್ನು ಗೌರವಿಸಬೇಕು. ಕಾಯಕ ಮಾಡಿ ಗಳಿಸಬೇಕು, ಗಳಿಸಿದ್ದನ್ನು ಉಳಿಸಬೇಕು, ಉಳಿಸಿದ್ದನ್ನು ಈ ಸಮಾಜಕ್ಕೆ ದಾಸೋಹದ ಮೂಲಕ ವಿನಿಯೋಗಿಸಬೇಕು ಎಂಬುದು ಅವರ ಆಂತರ್ಯವಾಗಿದೆ ಎಂದರು.

ಅಕ್ಕ ಮಹಾದೇವಿ ಸೇರಿದಂತೆ 33 ಶರಣೆಯರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅನುಭವ ಮಂಪಟದಲ್ಲಿ ಅವಕಾಶ ನೀಡಲಾಗಿತ್ತು. ಬಸವಾದಿ ಪ್ರಮಥರು 12ನೇ ಶತಮಾನದಲ್ಲೇ ಮಹಿಳಾ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದ್ದರು ಎಂದು ತಿಳಿಸಿದರು.

ಬಸವಣ್ಣನವರನ್ನು ನಮ್ಮ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತೆ ತಾವೂ ಸೇರಿದಂತೆ ಸಮಾಜದ ಜನಪ್ರತಿನಿಧಿಗಳು, ಮಠಾಧಿಪತಿಗಳು, ಹರಚರಗುರು ಮೂರ್ತಿಗಳು ಅಂದು ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರಿಗೆ ಮನವಿ ಮಾಡಿದಾಗ, ತಡ ಮಾಡದೆ ಬಸವಣ್ಣನವರನ್ನು ಈ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರು ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಬೇಕು ಎಂದರು.

ಬೆಂಗಳೂರು ಮಹಾನಗರ ಕಾಂಕ್ರೀಟ್ ಕಾಡಾಗುತ್ತಿದ್ದು, ಇಲ್ಲಿ ಜನರಿಗೆ ಅಗತ್ಯವಾದ ಶ್ವಾಸತಾಣ ನಿರ್ಮಿಸುವ ಉದ್ದೇಶದಿಂದ ನಾನು ಅರಣ್ಯ ಸಚಿವನಾಗಿದ್ದಾಗ ಯಲಹಂಕ ಬಳಿಯ ಮಾದಪ್ಪನ ಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ ನಿರ್ಮಾಣ ಮಾಡುವ ಸಂಕಲ್ಪ ಮಾಡಿ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದಾಗ ಅವರು ಸಂತೋಷದಿಂದ ಒಪ್ಪಿಗೆ ಸೂಚಿಸಿದ್ದಷ್ಟೇ ಅಲ್ಲ. ಇದಕ್ಕೆ ಸಚಿವ ಸಂಪುಟದ ಅನುಮೋದನೆಯನ್ನೂ ನೀಡಿ 20 ಕೋಟಿ ರೂ. ಮಂಜೂರು ಮಾಡಿದರು ಎಂದು ತಿಳಿಸಿದರು.

ಇಂದು ಸಮಾಜದಲ್ಲಿ ದ್ವೇಷ, ಅಸೂಯೆ, ಅಶಾಂತಿ ಇದೆ. ಧರ್ಮದ ಹೆಸರಲ್ಲಿ ಕೆಲವರು ವಿಷಬೀಜ ಬಿತ್ತುತ್ತಾ ಸಮಾಜದ ಶಾಂತಿಯನ್ನೇ ಕದಡುತ್ತಿದ್ದಾರೆ. ಆದರೆ ಬಸವಣ್ಣನವರು 12ನೇ ಶತಮಾನದಲ್ಲಿ ಧರ್ಮ ಎಂದರೇನು ಎಂಬುದನ್ನು ಒಂದು ಸರಳ ವಾಕ್ಯದಲ್ಲಿ ತಿಳಿಸಿದ್ದರು. ದಯೆ ಇಲ್ಲದ ಧರ್ಮ ಯಾವುದಯ್ಯ, ದಯವೇ ಧರ್ಮದ ಮೂಲ ಎಂಬ ಸಂದೇಶ ಸಾರಿದರು ಎಂದರು.

ಇಂದಿನ ಯುವಜನರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಅವರಿಗೆ ವಚನಗಳನ್ನು ಕಲಿಸಿದರೆ, ಅದರ ಅರ್ಥ ತಿಳಿಸಿದರೆ ಆವರು ಸಂಸ್ಕಾರವಂತರಾಗುತ್ತಾರೆ. ಚಾರಿತ್ರ್ಯ ಉಳಿಸಿಕೊಳ್ಳುತ್ತಾರೆ. ಸಮಾಜದ ಗಣ್ಯ ವ್ಯಕ್ತಿಗಳಾಗುತ್ತಾರೆ ಎಂದು ತಿಳಿಸಿದರು.

ಕೆ.ಆರ್. ನಗರ ಶಾಸಕರಾದ ರವಿಶಂಕರ್ ಯುವ ಉತ್ಸಾಹಿ ಮತ್ತು ದಕ್ಷ ಶಾಸಕರಾಗಿದ್ದು, ಸಮಾಜದ ಜನರೊಂದಿಗೆ ನಿಂತಿದ್ದಾರೆ. ಮುಂದಿನ ದಿನಗಳಲ್ಲೂ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರುಗಳಾದ ರವಿಶಂಕರ್, ಗಣೇಶ್ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.