
ಎಚ್.ಡಿ.ಕೋಟೆ: ಶಿಕ್ಷಣವೇ ಸಮಾಜ ಪರಿವರ್ತನೆಯ ಪ್ರಬಲ ಅಸ್ತ್ರವಾಗಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್ ರಾಜು ತಿಳಿಸಿದರು.
ತಾಲೂಕಿನ ಮಂಟಿಯಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ಮಂಗಳವಾರ ಸಂಘಟನೆಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಅವರ
ಜನ್ಮದಿನದ ಅಂಗವಾಗಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬುದ್ಧರ ಶಾಂತಿ, ಬಸವಣ್ಣನವರ ಸಮಾನತೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿರುವ ದಸಂಸ ರಾಜ್ಯ ಸಂಚಾಲಕ ಮಾಗಡಿ ಶಂಕರ್ ಅವರು ತಮ್ಮ ಜೀವನವನ್ನೇ ಶೋಷಿತರು, ದಲಿತರು ಹಾಗೂ ಬಡವರ ಹಕ್ಕುಗಳಿಗಾಗಿ ಸಮರ್ಪಿಸಿಕೊಂಡಿದ್ದಾರೆ ಅವರು ಜನ್ಮದಿನವನ್ನು ವೈಯಾಕ್ತಿಕ ಸಂಭ್ರಮವಾಗಿ ಆಚರಿಸದೇ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಹಾದನೂರು ದೊಡ್ಡಸಿದ್ದು ಮಾತನಾಡಿ, 1970ರ ದಶಕದಲ್ಲಿ ಹುಟ್ಟಿದ ದಲಿತ ಸಂಘರ್ಷ ಸಮಿತಿಯು ಈ ನಾಡಿನ ಶೋಷಿತರು, ಬಡವರು ಮತ್ತು ದೀನದಲಿತರ ಕಣ್ಣೀರು ಒರೆಸುವ ಮಹತ್ತರ ಕಾರ್ಯ ಮಾಡಿದೆ. ಶಿಕ್ಷಣ, ಭೂಮಿ, ವಸತಿ, ಉದ್ಯೋಗ ಸೇರಿದಂತೆ ಮೂಲಭೂತ ಹಕ್ಕುಗಳು ವಂಚಿತ ವರ್ಗಗಳಿಗೆ ದೊರಕುವಂತೆ ಹೋರಾಟ ನಡೆಸಿದೆ ಎಂದು ಹೇಳಿದರು.
ಮಾವಳ್ಳಿ ಶಂಕರ್ ಅವರು ವಿದ್ಯಾರ್ಥಿ ದಿಶೆಯಿಂದಲೇ ಚಳುವಳಿಯಲ್ಲಿ ತೊಡಗಿಸಿಕೊಂಡು ತಮ್ಮ ಜೀವನದುದ್ದಕ್ಕೂ ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಯಾವುದೇ ರಾಜಿ ಮಾಡಿಕೊಳ್ಳದೆ ನ್ಯಾಯಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದಾರೆ. ಪ್ರೊ. ಬಿ. ಕೃಷ್ಣಪ್ಪ, ಡಾ. ಸಿದ್ದಲಿಂಗಯ್ಯ, ಚಂದ್ರಪ್ರಸಾದ್ ತ್ಯಾಗಿ, ಹರವೆ ದ್ಯಾವಯ್ಯ, ದೇವನೂರು ಮಹಾದೇವ, ಡಿ.ಜಿ. ಸಾಗರ್, ಎನ್. ವೆಂಕಟೇಶ್, ಮುನಿಸ್ವಾಮಿ ಸೇರಿದಂತೆ ಹಲವಾರು ಚಳುವಳಿ ನಾಯಕರೊಂದಿಗೆ ದಲಿತ ಹೋರಾಟಗಳಲ್ಲಿ ಸಕ್ರಿಯವಾಗಿ ಶ್ರಮಿಸಿದ ಅವರು, ಚಂದ್ರಗುತ್ತಿ ಬೆತ್ತಲೆ ಸೇವೆ ವಿರೋಧಿ ಹೋರಾಟ, ಪಿಟಿಸಿಎಲ್ ಹೋರಾಟ, “ಹೆಂಡ ಬೇಡ – ವಸತಿ ಶಾಲೆ ಬೇಕು” ಸೇರಿದಂತೆ ಅನೇಕ ಸಾಮಾಜಿಕ ಚಳುವಳಿಗಳಲ್ಲಿ ಮಾವಳ್ಳಿ ಶಂಕರ್ ಅವರು ಪ್ರಮುಖ ಪಾತ್ರವಹಿಸಿದ್ದಾರೆ.
ಅಂದಿನಿಂದ ಇಂದಿನವರೆಗೂ ಅನ್ಯಾಯದ ವಿರುದ್ಧ ನಿರಂತರ ಹೋರಾಟ ಮಾಡುವ ಮೂಲಕ ದಲಿತ ಹಾಗೂ ಸಾಂಸ್ಕೃತಿಕ ಚಳುವಳಿಗಳ ಜೀವಂತ ಜ್ವಾಲೆಯಾಗಿದ್ದಾರೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ದಸಂಸ (ಅಂಬೇಡ್ಕರ್ ವಾದ) ಸಂಘಟನಾ ಸಂಚಾಲಕ ಚನ್ನಕೋಟೆ ,ಬೋಗೇಶ್ವರ ಕಾಲೋನಿ ಕಾಳಪಾಜ್ಜಿ, ಮಟಕರೆ ಮಹೇಶ್, ಹೈರಿಗೆ ಕುಮಾರ್, ಅನೀಲ್, ಶಿವರಾಜು.ಎಂ, ಸರಗೂರು ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ಹಾದನೂರು ಚಂದ್ರ, ಮಣಿಕಂಠ, ಕೃಷ್ಣ ಕುರ್ಣೇಗಾಲ, ಶಿವರಾಜು, ಶಿವಕುಮಾರ್, ಚಲುವರಾಜು,ಮಹದೇವ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು