ರಾಜ್ಯಮಟ್ಟದ ಇಂಫ್ರೆಶನ್ ಮಾಧ್ಯಮ ಹಬ್ಬ: ಮೈಸೂರು ವಿ.ವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಚಾಂಪಿಯನ್
ಪ.ಜಾತಿ, ಪಂಗಡದ ಮೀಸಲಾತಿ ಹೆಚ್ಚಳ ಜಾರಿಗೊಳಿಸಿದ್ದರೆ ಬೀದಿಗಿಳಿದು ಹೋರಾಟ; ಮಾಜಿ ಸಚಿವ ಶ್ರೀರಾಮುಲು *ಸಿಎಂ ಸಿದ್ದರಾಮಯ್ಯ ಬಳಿಗೆ ಶೀಘ್ರವೇ ಹಾಲಿ ಮಾಜಿ ಸಚಿವರು, ಹಾಲಿ-ಮಾಜಿ ಶಾಸಕರ ನಿಯೋಗ
ಮೈಸೂರು; ಪ.ಜಾತಿ, ಪಂಗಡದವರಿಗೆ ಹೆಚ್ಚಿಸಲಾಗಿರುವ ಮೀಸಲಾತಿಯನ್ನು ರಾಜ್ಯ ಸರ್ಕಾರ ಕೂಡಲೇ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಬುಧವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಕಳೆದ ೩೦ ವರ್ಷಗಳಿಂದಲೂ ಪ.ಜಾತಿ, ಪಂಗಡದವರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇದನ್ನು ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿಯವರು ಗಮನಿಸಿ, ಈ ಬಗ್ಗೆ ವರದಿ ನೀಡಲು ನಾಗಮೋಹನ ದಾಸ್ ಆಯೋಗವನ್ನು ರಚಿಸಿದ್ದರು. ಆಯೋಗ ಕೂಡ ವರದಿಯನ್ನು ನೀಡಿತ್ತು. ನಮ್ಮ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು, ವರದಿಯನ್ನು ಅಂಗೀಕರಿಸಿ, ಪ.ಜಾತಿಯವರಿಗೆ ಇದ್ದ ಮೀಸಲಾತಿಯನ್ನು ಶೇ ೧೫ ರಿಂದ ೧೭ಕ್ಕೆ, ಪರಿಶಿಷ್ಟ ಪಂಗಡಕ್ಕೆ ಇದ್ದ ಮೀಸಲಾತಿಯನ್ನು ೩ ರಿಂದ ೭ ಕ್ಕೆ ಜನಸಂಖ್ಯೆ ಆಧಾರದ ಮೇಲೆ ಹೆಚ್ಚಿಸಿ ಆದೇಶ ಹೊರಡಿಸಿದರು. ಇದಕ್ಕೆ ಉಭಯ ಸದನಗಳಲ್ಲೂ ಅಂಗೀಕಾರ ದೊರೆಯಿತು. ಸರ್ವ ಪಕ್ಷಗಳ ಸಭೆಯಲ್ಲೂ ಕೂಡ ಒಪ್ಪಿಗೆ ನೀಡಲಾಯಿತು. ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರೇ ಮೀಸಲಾತಿ ಹೆಚ್ಚಳಕ್ಕೆ ನಮ್ಮ ಸಂಪೂರ್ಣ ಒಪ್ಪಿಗೆ ಇರುವುದಾಗಿ ತಿಳಿಸಿದ್ದರು. ಆದರೆ ನಮ್ಮ ಸರ್ಕಾರ ಚುನಾವಣೆಯಲ್ಲಿ ಬಿದ್ದು ಹೋಯಿತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮೂರು ವರ್ಷ ಅಧಿಕಾರವನ್ನು ಪೂರೈಸಿದ್ದಾರೆ. ಆದರೆ ಇನ್ನೂ ಕೂಡ ಮೀಸಲಾತಿ ಹೆಚ್ಚಳವನ್ನು ಶಿಕ್ಷಣ, ಉದ್ಯೋಗದಲ್ಲಿ ಜಾರಿಗೆ ತರದೆ, ಈ ಸಮುದಾಯವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಿಎಂ ಸಿದ್ದರಾಮಯ್ಯನವರು ಪ.ಜಾತಿ, ಪಂಗಡದವರಿಗೆ ಮೀಸಲಾತಿ ಹೆಚ್ಚಳವನ್ನು ಮಾಡುವುದಾಗಿ ಹೇಳಿ ರಾಜ್ಯಪಾಲರಿಂದಲೂ ಸಹಿ ಪಡೆದು, ಒಪ್ಪಿಗೆ ಪಡೆದುಕೊಂಡಿದ್ದಾರೆ. ಆದರೆ ಆ ನಂತರ ಮೀಸಲಾತಿ ಪ್ರಮಾಣವನ್ನು ಶೇ ೫೬ ರಿಂದ ೫೦ಕ್ಕೆ ಇಳಿಸಿ, ಪ.ಜಾತಿ, ಪಂಗಡದವರಿಗೆ ಮೀಸಲಾತಿ ಹೆಚ್ಚಳವನ್ನು ಮಾಡದೆ ಅನ್ಯಾಯ ಮಾಡುತ್ತಿದ್ದಾರೆ. ಮೀಸಲಾತಿ ಹೆಚ್ಚಳದ ಕುರಿತು ರಾಜ್ಯ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೂ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳವನ್ನು ಸಮರ್ಥಿಸಿಕೊಳ್ಳುವ ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ. ಇದರಿಂದಾಗಿ ಹೈಕೋರ್ಟ್ ತಡೆಯಾಜ್ಞೆಯನ್ನು ನೀಡಿದೆ. ಇದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಹೀಗಾಗಿ ಹೀಗಾಗಲೇ ಮೀಸಲಾತಿ ಹೆಚ್ಚಳ ಕೋಟಾದಡಿ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಅವಕಾಶ ಪಡೆದಿದ್ದ ೭ ಮಂದಿ ವಿದ್ಯಾರ್ಥಿಗಳು ಅತಂತ್ರ ಪರಿಸ್ಥಿತಿಯಿಂದ ಬೇಸೆತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ ಎಂದರು. ಹಿಂದುಳಿದ ವರ್ಗದವರು, ದಲಿತರ ಚಾಂಪಿಯನ್ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯನವರು ಬಿಜೆಪಿ ಸರ್ಕಾರ ಪ.ಜಾತಿ, ಪಂಗಡದವರಿಗೆ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸಹಿಸಿಕೊಳ್ಳಲಾಗದೆ, ಉರಿ ಉರಿಯಿಂದ ಈ ವರ್ಗದವರಿಗೆ ತೊಂದರೆಯನ್ನು ಕೊಡುತ್ತಿದ್ದಾರೆ. ಪ.ಪಂಗಡದಲ್ಲಿ ಈ ಮೊದಲು ೫೦ ಜಾತಿಗಳಿದ್ದವು. ಈಗ ಬೇರೆ, ಬೇರೆ ಜಾತಿಯನ್ನು ಇಲ್ಲಿಗೆ ತಂದು ಸೇರಿಸುವ ಮೂಲಕ ಈಗ ಪ.ಪಂಗಡದ ಪಟ್ಟಿಯಲ್ಲಿ ೯೦ ಜಾತಿಗಳಿರುವಂತೆ ಮಾಡಿದ್ದಾರೆ. ಆ ಮೂಲಕ ಪ.ಪಂಗಡದವರು ಮೀಸಲಾತಿ ಸೌಲಭ್ಯವನ್ನು ಪಡೆಯದಂತೆ ಮಾಡುವ ಹುನ್ನಾರವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.