
ಶಾಸಕ ಮಂಜುನಾಥ್ ಘೋಷಣೆ; ಮನವೊಲೈಕೆ ಬಳಿಕ ಪ್ರತಿಭಟನೆ ಕೈಬಿಟ್ಟ ಗ್ರಾಮಸ್ಥರು, ಮೃತರ ಕುಟುಂಬದವರು
ಹನೂರು; ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ವಲಯದಲ್ಲಿ ಅರಣ್ಯ ಇಲಾಖೆಯವರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಮೂವರು ಕುಟುಂಬದವರಿಗೆ ತಲಾ 15 ಲಕ್ಷರೂಗಳ ಪರಿಹಾರವನ್ನು ನೀಡುವುದಾಗಿ ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಘೋಷಿಸಿದ್ದು, ಪ್ರತಿಭಟನಾನಿರತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಆಕ್ರೋಶಗೊಂಡು ಧರಣಿ ನಡೆಸುತ್ತಿದ್ದ ಕುಟುಂಬಸ್ಥರು ಹಾಗೂ ತೋಮಿಯಾರ್ ಪಾಳ್ಯ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಹೋರಾಟವನ್ನು ಕೈಬಿಟ್ಟಿದ್ದಾರೆ.
ಶಾಸಕ ಎಂ.ಆರ್. ಮಂಜುನಾಥ್ ಅವರು
ಹನೂರು ಪಟ್ಟಣದಲ್ಲಿ ಭಾನುವಾರ ನಡೆಯುತ್ತಿದ್ದ ಕುಟುಂಬಸ್ಥರ ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ಮನವೊಲಿಸುವ ಪ್ರಯತ್ನ ಮಾಡಿದರು. ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ಒಟ್ಟು 15 ಲಕ್ಷ ಪರಿಹಾರ ನೀಡಲಾಗುವುದು. ರಾಜ್ಯ ಸರ್ಕಾರ ಪ್ರಕರಣದ ತನಿಖೆಯ ಹೊಣೆಯನ್ನು ಮ್ಯಾಜಿಸ್ಟೆçÃಟ್ಗೆ ವಹಿಸಿದೆ. ತಪ್ಪಿತಸ್ಥ ಅಧಿಕಾರಿಗಳು, ಅಮಾನತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮನವರಿಕೆ ಮಾಡಿದರು.
ಸರ್ಕಾರದಿಂದ ತಾತ್ಕಾಲಿಕವಾಗಿ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಜೊತೆಗೆ ವೈಯಕ್ತಿಕವಾಗಿ ತಾನು 10 ರೂ. ಲಕ್ಷ ಪರಿಹಾರ ನೀಡಲಿದ್ದು, ಒಟ್ಟು 15 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಗುಂಡು ಹಾರಿಸಿದ ಪ್ರಕರಣ ಸಂಬAಧ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ತನಿಖಾ ತಂಡವನ್ನೂ ರಚಿಸಲಾಗಿದ್ದು, ವರದಿ ಸಲ್ಲಿಕೆಯಾದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಹೇಳಿದರು. ಶಾಸಕರು ಭರವಸೆ ನೀಡಿದ ಬಳಿಕ ತಾತ್ಕಾಲಿಕವಾಗಿ ನಮ್ಮ ಹೋರಾಟವನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ರೈತ ಮುಖಂಡರು ಘೋಷಣೆ ಮಾಡಿದರು.
ಈ ಹಿನ್ನಲೆಯಲ್ಲಿ ಹನೂರು ಪಟ್ಟಣದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿತು.
ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೂವರು ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ವಾರಸುದಾರರು ಸ್ವಗ್ರಾಮಕ್ಕೆ ಶವಗಳನ್ನು ತೆಗೆದುಕೊಂಡು ಹೋದರು.