Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮೇಲೆ ಶಾಸಕ ಎಚ್.ಡಿ. ರೇವಣ್ಣ ದರ್ಪ ತೋರಿಸಿರುವುದು ಖಂಡನೀಯ; ದ್ಯಾವಪ್ಪ ನಾಯಕ

ಮೈಸೂರು: ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಮೇಲೆ ಶಾಸಕ ಎಚ್.ಡಿ. ರೇವಣ್ಣ ದರ್ಪ ತೋರಿಸಿ ಮಾತನಾಡಿರುವುದು ಖಂಡನೀಯ’ ಎಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ದ್ಯಾವಪ್ಪ ನಾಯಕ ಹೇಳಿದರು.
ಬುಧವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಕ್ಕೆ ಸೇರಿದ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ವಿರುದ್ಧ ಯಾವುದೇ ಸಾಕ್ಷಾಧಾರವಿಲ್ಲದೆ ಸುಳ್ಳು ಆರೋಪಗಳನ್ನು ಶಾಸಕ ಎಚ್.ಡಿ.ರೇವಣ್ಣ ನವರು ಮಾಡುತ್ತಿದ್ದಾರೆ. ಕಾನೂನು ಮತ್ತು ಅಡಳಿತಾತ್ಮಕ ಜವಾಬ್ದಾರಿಯ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಹಾಗೂ ವೈಯಕ್ತಿಕವಾಗಿ ನಿಂದಿಸುವ ಪ್ರವೃತ್ತಿಯು ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂದರು.
ತಳ ಸಮುದಾಯದಿಂದ ಬಂದಿರುವ ಮಹಿಳಾ ಅಧಿಕಾರಿಯು ದಕ್ಷತೆ, ಪ್ರಾಮಾಣಿಕೆ ಹಾಗೂ ಆತ್ಮವಿಶ್ವಾದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅದನ್ನು ಸಹಿಸದೇ ಅವರ ಮೇಲೆ ದರ್ಪ ತೋರುವುದು, ಒತ್ತಡ ಹೇರುವುದು ಹಾಗೂ ರಾಜಕೀಯ ಪ್ರಭಾವ ಬೀರುವುದು ಸರಿಯಲ್ಲ. ಜಿಲ್ಲಾಧಿಕಾರಿಯಾಗಿ ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸೂಕ್ತ ವಾತಾವರಣ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಅಧಿಕಾರಿಗಳು ನಾನು ಹೇಳಿದಂತೆ ಮಾತ್ರವೇ ಕೇಳಬೇಕು ಎಂಬ ಧೋರಣೆಯನ್ನು ಶಾಸಕ ಎಚ್.ಡಿ.ರೇವಣ್ಣ ಬಿಡಬೇಕು. ಕೀಳುಮಟ್ಟದ ರಾಜಕಾರಣ ಮಾಡಬಾರದು. ಆ ಅಧಿಕಾರಿ ವಿರುದ್ಧ ತೇಜೋವಧೆ ನಿಲ್ಲಿಸಬೇಕು. ಮಹಿಳಾ ಅಧಿಕಾರಿಗೆ ಅಗೌರವ ನೀಡುವಂತಹ ರಾಜಕಾರಣಿಗಳಿಗೆ ಬುದ್ಧಿ ಕಲಿಸಬೇಕಾಗುತ್ತದೆ ಎಂದರು.
ಲತಾಕುಮಾರಿ ಅವರ ವಿಷಯದಲ್ಲಿ ರೇವಣ್ಣ ಅವರು ದರ್ಪದ ವರ್ತನೆ ಮುಂದುವರಿಸಿದಲ್ಲಿ ಇಡೀ ವಾಲ್ಮೀಕಿ ಸಮುದಾಯ ಹಾಗೂ ಮಹಿಳೆಯರೊಂದಿಗೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಸುರೇಶ್ ಕುಮಾರಬೀಡು, ಉಪಾಧ್ಯಕ್ಷ ಎಂ.ದಾಸಪ್ಪ ಅಗತ್ತೂರು, ಜಿಲ್ಲಾ ಘಟಕದ ಅಧ್ಯಕ್ಷ ನಾಗಲಿಂಗಪ್ಪ ಉಪಸ್ಥಿತರಿದ್ದರು