
ಹುಣಸೂರು ; ಖಾಸಗಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ವಸಂತಕುಮಾರ್ ಎಂಬುವರ ಪುತ್ರ ರಂಜಿತ್ (32) ಮೃತರು. ಇವರಿಗೆ ತಂದೆ, ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.
ರಂಜಿತ್ ಕೆ.ಆರ್.ನಗರದಲ್ಲಿ ಶಾಖೆ ಹೊಂದಿರುವ ಖಾಸಗಿ ಮೈಕ್ರೋ ಫೈನಾನ್ ನಲ್ಲಿ ಮನೆ ನಿರ್ಮಾಣಕ್ಕಾಗಿ 12 ಲಕ್ಷ ರೂ. ಸಾಲ ಪಡೆದಿದ್ದರು. ಸುಸ್ತಿಯಾಗಿದ್ದಾರೆ ಎಂದು ಎರಡು ಬಾರಿ ಮೈಕ್ರೋ ಫೈನಾನ್ ನವರು ಮನೆಗೆ ಬೀಗ ಜಡಿದಿದ್ದರು. ಕೆಲ ದಿನಗಳ ಹಿಂದೆ 3 ಲಕ್ಷ ರೂ. ಸೇರಿದಂತೆ ಈವರೆಗೆ 8 ಲಕ್ಷ ರೂ. ಪಾವತಿಸಿದ್ದರು.
ಈ ಬಾರಿ ಮಳೆ ಕೊರತೆಯಿಂದ ಜಮೀನಿನಲ್ಲಿ ಬೆಳೆಯೂ ಕೈ ಹತ್ತಿರಲಿಲ್ಲ. ಮತ್ತೆ ಮೈಕ್ರೋ ಫೈನಾನ್ ನವರು ಬಂದು ಮನೆ ಬೀಗ ಹಾಕುತ್ತಾರೆ. ಗ್ರಾಮದಲ್ಲಿ ಅವಮಾನವಾಗುತ್ತದೆ ಎಂಬ ಆತಂಕದಿAದ ರಂಜಿತ್ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಗಾಗ ಪತ್ನಿ ಹತ್ತಿರ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಬಿಳಿಕೆರೆ ಠಾಣಾ ಪೊಲೀಸರಿಗೆ ಪತಿ ರಂಜಿತ್ ಸಾವಿಗೆ ಮೈಕ್ರೋ ಫೈನಾನ್ಸ್ನವರ ಕಿರುಕುಳವೇ ಕಾರಣ ಎಂದು ಪತ್ನಿ ಭಾಗ್ಯ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.