
ಮೈಸೂರು; ಕಾಂಗ್ರೆಸ್ ಮುಖಂಡ ಎಸ್.ಸಿ.ಬಸವರಾಜು ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಕೂಡಲೇ ನೇಮಕ ಮಾಡಬೇಕೆಂದು ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟ ಆಗ್ರಹಿಸಿದೆ.
ಸೋಮವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ದ್ಯಾವಪ್ಪ ನಾಯಕ, ಮೈಸೂರು ವಿಭಾಗದಲ್ಲಿ ನಾಯಕ ಸಮುದಾಯವು ಸುಮಾರು ೯ರಿಂದ ೧೦ ಲಕ್ಷ ಜನ ಸಂಖ್ಯೆಯಿದ್ದು, ಇಲ್ಲಿಯವರೆಗೆ ನಮ್ಮ ಸಮುದಾಯದ ಹೆಚ್ಚಿನ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದರೂ ಕೂಡ, ಇಂದಿನವರೆಗೂ ಈ ಭಾಗದಲ್ಲಿ ಯಾರನ್ನು ಕೂಡ ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿರುವುದಿಲ್ಲ. ಆದರೆ, ಜೆ.ಡಿ.ಎಸ್. ಮತ್ತು ಬಿಜೆಪಿ ಪಕ್ಷದವರೂ ಈ ಭಾಗದಲ್ಲಿ ಸಮುದಾಯದ ಮುಖಂಡರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿರುತ್ತಾರೆ. ಆದ್ದರಿಂದ ಎಸ್.ಸಿ. ಬಸವರಾಜು ಅವರನ್ನು ಕಾಂಗ್ರೆಸ್ ಪಕ್ಷ ಪ್ರಸ್ತುತ ಜೂನ್ ತಿಂಗಳಲ್ಲಿ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿದರೆ. ಇನ್ನು, ಹೆಚ್ಚಿನ ರೀತಿಯಲ್ಲಿ ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಎಸ್.ಸಿ. ಬಸವರಾಜು ಅವರು ಸುಮಾರು ೪೦ ವರ್ಷಗಳಿಂದ ಸಕ್ರಿಯವಾಗಿ ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ” ಈ ಭಾಗದಲ್ಲಿ ಗುರುತಿಸಿಕೊಂಡಿರುತ್ತಾರೆ. ಅಲ್ಲದೆ, ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಇವರ ಪಕ್ಷ ಸೇವೆ ಮತ್ತು ಸಮುದಾಯದ ಸೇವಾ ಹಿರಿತವನ್ನು ಪರಿಗಣಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತಿಪ್ಪೂರು ಮಹದೇವನಾಯ, ವೆಂಕಟೇಶ್ ಡಿ.ನಾಯಕ, ಶಿವಣ್ಣ ಜೆ, ಸುರೇಶ್ ಕುಮಾರ ಬೀಡು, ನರಸಿಂಹನಾಯಕ ಮತ್ತಿತರರು ಹಾಜರಿದ್ದರು.