3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಠಿಣ ಪರಿಶ್ರಮದಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ; ಶಾಸಕ ಹರೀಶ್‌ಗೌಡ


ಮೈಸೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಠಿಣ ಅಭ್ಯಾಸ ಮತ್ತು ಪರಿಶ್ರಮದಿಂದ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಹುಣಸೂರು ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ಮೈಸೂರಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಪತ್ರಕರ್ತರಿಗೆ ಅಭಿನಂದನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯ ಅಭ್ಯಾಸದೊಂದಿಗೆ ಲೋಕಜ್ಞಾನವನ್ನು ವಿದ್ಯಾರ್ಥಿಗಳು ಗಳಿಸಬೇಕು. ಯಾವ ವಿದ್ಯಾರ್ಥಿ ಸಾಮಾನ್ಯ ಜ್ಞಾನವನ್ನು ಸಂಪಾದಿಸುವುದಿಲ್ಲವೋ, ಆತ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ಕಷ್ಟ ಎಂದು ತಿಳಿಸಿದರು.
ಪ್ರಸ್ತುತ ದಿನಗಳು ಸ್ಪರ್ಧಾತ್ಮಕ ಯುಗವಾಗಿದೆ. ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಲು ಹೆಚ್ಚಿನ ಪರಿಶ್ರಮ ಹಾಕಬೇಕು. ಪೋಷಕರು, ಶಿಕ್ಷಕರು ಮಾರ್ಗದರ್ಶನ ನೀಡಬಹುದು. ಆದರೆ, ವಿದ್ಯಾರ್ಥಿಗಳು ಅವರ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳಬೇಕು. ಮಕ್ಕಳು ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದುವರಿಯಬೇಕು. ಆದರೆ ವಿದ್ಯಾವಂತರಾಗದಿದ್ದರೆ, ಸಾಮಾನ್ಯ ಜ್ಞಾನ ಇಲ್ಲದಿದ್ದರೆ, ಈ ಸಮಾಜದಲ್ಲಿ ಯಶಸ್ವಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ ಎಂದು ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಅದರಲ್ಲಿ ಶ್ರದ್ದೆ, ಪ್ರೀತಿ ಇರಬೇಕು. ಪತ್ರಕರ್ತರು ಸುದ್ದಿಮನೆಗಷ್ಟೇ ಸೀಮಿತವಾಗದೆ ಮಕ್ಕಳ ಓದು, ಹವ್ಯಾಸಗಳನ್ನು ಗಮನಿಸಿ ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ನಂತರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ವೇಳೆ ಮೈಸೂರಿನ ವರ್ಗಾವಣೆಗೊಂಡರು ಹಾಗೂ ಸೇವೆಯಿಂದ ನಿವೃತ್ತರಾದ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಆದಿಚುಂಚನಗಿರಿ ಸಂಸ್ಥಾನದ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಜಿಎಸ್‌ಎಸ್ ಸಮೂಹ ಸಂಸ್ಥೆಯ ಮುಖ್ಯಸ್ಥ ಶ್ರೀಹರಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಮುಂತಾದವರು ಉಪಸ್ಥಿತರಿದ್ದರು.