
ಮೈಸೂರು: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪ್ರಕೃತಿಯನ್ನು ಉಳಿಸುವ ಮೂಲಕವೇ ಮಾನವಕುಲದ ಭವಿಷ್ಯವನ್ನು ಸುರಕ್ಷಿತಗೊಳಿಸಲು ಸಾಧ್ಯ ಎಂದು ಹಿರಿಯ ಸಾಹಿತಿ ಹಾಗೂ ಶಿಕ್ಷಣ ತಜ್ಞ ಪ್ರೊ. ಕೆ. ಕಾಳಚೆನ್ನೆಗೌಡ ತಿಳಿಸಿದರು.
ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 8ನೇ ವರ್ಷದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಪ್ರಕೃತಿ ಮತ್ತು ಪರಿಸರ ಮಾನವನ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ವ್ಯಕ್ತಿಯ ಬೆಳವಣಿಗೆಗೆ ಕುಟುಂಬದ ಜೊತೆಗೆ ಉತ್ತಮ ಪರಿಸರವೂ ಅಗತ್ಯವಾಗಿದೆ. ಆಹಾರ ಉತ್ಪಾದನೆ, ಶುದ್ಧ ಗಾಳಿ, ನೀರು ಸೇರಿದಂತೆ ಬದುಕಿಗೆ ಬೇಕಾದ ಎಲ್ಲ ಸಂಪನ್ಮೂಲಗಳನ್ನು ಪ್ರಕೃತಿಯೇ ಒದಗಿಸುತ್ತಿದೆ. ಸುಮಾರು 430 ಕೋಟಿ ವರ್ಷಗಳ ಇತಿಹಾಸ ಹೊಂದಿರುವ ಭೂಮಿಯನ್ನು ಕಾಪಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ, ಅತಿಯಾದ ನಗರೀಕರಣ ಹಾಗೂ ಪರಿಸರ ಮಾಲಿನ್ಯ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಶ್ವಸಂಸ್ಥೆಯು 1973ರಿಂದ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಜಗತ್ತಿಗೆ ಸಾರುತ್ತಿದೆ. ಇಂದಿನ ಜಗತ್ತಿನಲ್ಲಿ ಯುದ್ಧಗಳ ಸ್ವರೂಪವೂ ಬದಲಾಗಿದ್ದು, ಆಧುನಿಕ ವಿನಾಶಕಾರಿ ಆಯುಧಗಳ ಬಳಕೆ ಪ್ರಕೃತಿಗೆ ಮತ್ತಷ್ಟು ಹಾನಿ ಉಂಟುಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪರಿಸರ ಪ್ರೇಮಿ ಶಿವಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ದಿನದ ಕೆಲವೇ ನಿಮಿಷಗಳನ್ನು ಪರಿಸರ ಸಂರಕ್ಷಣೆಗೆ ಮೀಸಲಿಟ್ಟರೂ ದೊಡ್ಡ ಮಟ್ಟದ ಬದಲಾವಣೆ ಸಾಧ್ಯವಾಗುತ್ತದೆ. ಗಿಡ ನೆಡುವುದು ಮತ್ತು ಅವುಗಳನ್ನು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಪರಿವೀಕ್ಷಕ ಯೋಗೇಶ್ ಮಾತನಾಡಿ, ಪರಿಸರದ ಬಗ್ಗೆ ಪ್ರತಿಯೊಬ್ಬ ನಾಗರಿಕನಲ್ಲೂ ಜಾಗೃತಿ ಮೂಡಬೇಕಿದೆ. ಭೂಮಿ ಮತ್ತು ಪ್ರಕೃತಿಯ ಮೇಲೆ ನಿರಂತರ ಒತ್ತಡ ಹೆಚ್ಚಾದರೆ ಮುಂದಿನ ಪೀಳಿಗೆಗಳು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಿAದ ಸಸಿ ನೆಡುವ ಕಾರ್ಯಕ್ರಮ, ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಸಸಿಗಳ ಉಚಿತ ವಿತರಣೆ, ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಜಾಥಾ, ಹಾಗೂ ವಿದ್ಯಾರ್ಥಿಗಳಿಂದ ಪರಿಸರ ಗೀತೆಗಳ ಗಾಯನ ನಡೆಯಿತು. ಈ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವಲ್ಲಿ ವಿಶೇಷ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಚೆನ್ನಬಸಪ್ಪ, ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಎಂ. ಶಿವರಾಜು, ನಿವೃತ್ತ ಮುಖ್ಯೋಪಾಧ್ಯಾಯರಾದ ಶುಭಮಣಿ, ರಾಜೇಂದ್ರ ಸುಬ್ರಮಣಿ, ಮಂತೇಶ್, ಭ್ರಮಾರಂಭ, ಚೈತ್ರಕುಮಾರಿ, ಪದ್ಮ, ಬೃಂದಾಬಾಯಿ, ವಿದ್ಯಾವತಿ, ಸ್ಪರ್ಶ, ಎಸ್. ಲತಾ, ಎಸ್. ಪವನ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.