3Kaala News

ಸುಭಾಷಿತ 

ಓಟದ ಬದುಕಿನಲ್ಲಿ ಎಲ್ಲವನ್ನು ತಕ್ಷಣವೇ ಪಡೆದುಕೊಳ್ಳಬೇಕೆಂಬ ನಿನ್ನ ಹಟವೇ ನಿನ್ನ ನೆಮ್ಮದಿಯನ್ನು ಕದಿಯುತ್ತದೆ. ಸಮಯಕ್ಕಿಂತ ಮುಂಚೆ, ಹಣೆ ಬರಕಿಂತ ಮುಂಚೆ, ಹೆಚ್ಚಿಗೆ ಯಾರಿಗೂ ಏನೂ ಸಿಗುವುದಿಲ್ಲ . ನಿನ್ನ ಪ್ರಯತ್ನ ನಿರಂತರವಾಗಿರಲಿ. ಆದರೆ, ಫಲಿತಾಂಶಕ್ಕಾಗಿ ಇಂದಿನ ಶಾಂತಿಯನ್ನು ಬಲಿ ಕೊಡಬೇಡ. ಭಗವಾನ್ ಶ್ರೀ ಕೃಷ್ಣ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸದ್ವಿದ್ಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ


`ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಧ್ಯೇಯದಡಿ ಸಮೂಹ ಯೋಗಾಭ್ಯಾಸ
ಮೈಸೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸದ್ವಿದ್ಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವತಿಯಿಂದ ಶುಕ್ರವಾರ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಾಲೇಜಿನ ಕೈಲಾಸಂ ಮಂಟಪದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
“ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬ ಧ್ಯೇಯ ವಾಕ್ಯದಡಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉತ್ಸಾಹದಿಂದ ಪಾಲ್ಗೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವೈ.ಆರ್. ರಮೇಶ್ ಮಾತನಾಡಿ, ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದ್ದು, ಆರೋಗ್ಯಕರ ಜೀವನಶೈಲಿಗೆ ಅತ್ಯುತ್ತಮ ಮಾರ್ಗವಾಗಿದೆ ಎಂದು ಹೇಳಿದರು. ಇಂದಿನ ಒತ್ತಡದ ಜೀವನದಲ್ಲಿ ಯೋಗಾಭ್ಯಾಸವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗಾಭ್ಯಾಸ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಯೋಗಾಭ್ಯಾಸದಿಂದ ದೇಹದ ಲವಲವಿಕೆ ಹೆಚ್ಚುವುದು, ರಕ್ತಸಂಚಾರ ಸುಧಾರಿಸುವುದು, ಮಾನಸಿಕ ಒತ್ತಡ ಕಡಿಮೆಯಾಗುವುದು ಹಾಗೂ ಏಕಾಗ್ರತೆ ವೃದ್ಧಿಯಾಗುವುದು ಎಂದರಲ್ಲದೇ, ತಾಡಾಸನ, ವೃಕ್ಷಾಸನ, ಭುಜಂಗಾಸನ, ವಜ್ರಾಸನ, ಪವನಮುಖ್ತಾಸನ ಸೇರಿದಂತೆ ಅನೇಕ ಆಸನಗಳ ಉಪಯೋಗಗಳು ಹಾಗೂ ಅವುಗಳಿಂದ ದೇಹದ ವಿವಿಧ ಅಂಗಾಂಗಗಳಿಗೆ ಆಗುವ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.
ಯೋಗವು ಕೇವಲ ವ್ಯಾಯಾಮವಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮದ ಸಮನ್ವಯ ಸಾಧಿಸುವ ಜೀವನ ಪದ್ಧತಿಯಾಗಿದೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಯೋಗಾಭ್ಯಾಸವನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಆರೋಗ್ಯಕರ ಮತ್ತು ಸಂತೋಷಮಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗಾಭ್ಯಾಸ ನಡೆಸಿ, ಅಂತರರಾಷ್ಟ್ರೀಯ ಯೋಗ ದಿನದ ಸಂದೇಶವನ್ನು ಸಾರಿದರು. ಯೋಗದ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂಬ ಅರಿವನ್ನು ಮೂಡಿಸುವ ಉದ್ದೇಶದಿಂದ ವಿವಿಧ ಜಾಗೃತಿ ಸಂದೇಶಗಳನ್ನು ನೀಡಲಾಯಿತು.
ಸಮೂಹ ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ ಹಾಗೂ ಯೋಗ ಪ್ರತಿಜ್ಞೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಡಾ. ರಾಹುಲ್, ಡಾ. ಪಾವನ, ಡಾ. ಶಿಲ್ಪ ಹಾಗೂ ಡಾ. ಅನಘ ಅವರು ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ಧ್ಯಾನ ವಿಧಾನಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ವಿವಿಧ ಆಸನಗಳ ಸರಿಯಾದ ವಿಧಾನಗಳನ್ನು ತಿಳಿಸಿಕೊಟ್ಟು ಅವುಗಳ ಆರೋಗ್ಯಕಾರಿ ಪ್ರಯೋಜನಗಳ ಕುರಿತು ಪ್ರಾತ್ಯಕ್ಷಿತೆ ಜೊತೆಗೆ ಯೋಗದ ಮಹತ್ವ ಮತ್ತು ಅದರ ಬಹುಮುಖ ಪ್ರಯೋಜನಗಳ ಮಾಹಿತಿಯನ್ನು ನೀಡಿದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ಬಿ.ವಿ. ಕೃಷ್ಣ, ಕಾಲೇಜಿನ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಚಿತ್ರ ಶೀರ್ಷಿಕೆ: ಸದ್ವಿದ್ಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕೈಲಾಸಂ ಮಂಟಪದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಡಾ. ರಾಹುಲ್, ಡಾ. ಪಾವನ, ಡಾ. ಶಿಲ್ಪ ಹಾಗೂ ಡಾ. ಅನಘ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸ ನಡೆಸುತ್ತಿರುವುದು. ಉಪ ಪ್ರಾಂಶುಪಾಲರಾದ ಇಂದುಮತಿ ಜಿ.ಕೆ., ದೈಹಿಕ ಶಿಕ್ಷಣ ಉಪನ್ಯಾಸಕ ಕೃಷ್ಣ ಅವರೊಂದಿಗೆ ಮತ್ತಿತರರು ಉಪಸಿತರಿದ್ದರು.