
ಮೈಸೂರು; ಕೃಷಿ ಭೂಮಿಯ ಆರೋಗ್ಯವನ್ನು ಕಾಪಾಡಲು ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಬೆಂಗಳೂರಿನ ಐಸಿಎಆರ್-ಅಟಾರಿ ವಲಯ-11ರ ಪ್ರಧಾನ ವಿಜ್ಞಾನಿ ಡಾ. ಎಂ.ಜೆ. ಚಂದ್ರೇಗೌಡ ಹೇಳಿದರು.
ಮೈಸೂರಿನ ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು ಕೃಷಿ ಭೂಮಿ ಉಳಿಸಿ ಅಭಿಯಾನ ಹಾಗೂ ಬದಲಾದ ಹವಾಮಾನಕ್ಕೆ ಸೂಕ್ತ ಬೆಳೆಗಳ ಆಯ್ಕೆ ಕುರಿತು ರೈತ-ವಿಜ್ಞಾನಿಗಳ ಸಂವಾದ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ಥೂರು, ಕೃಷಿ ಇಲಾಖೆ ಮೈಸೂರು, ಆತ್ಮ ಯೋಜನೆ ಮೈಸೂರು ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಕೃಷಿ ಭೂಮಿ ಉಳಿಸಿ ಅಭಿಯಾನ , ಬದಲಾದ ಹವಾಮಾನಕ್ಕೆ ಸೂಕ್ತ ಬೆಳೆಗಳ ಆಯ್ಕೆ ಹಾಗೂ ರೈತ-ವಿಜ್ಞಾನಿಗಳ ಸಂವಾದ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ಐಸಿಎಆರ್ ಸಂಸ್ಥೆಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಹಮ್ಮಿಕೊಳ್ಳಲಾಗುತ್ತಿರುವ “ಖೇತ್ ಬಚಾವ್ ಅಭಿಯಾನ”ದ ರಾಷ್ಟಿçÃಯ ಮಹತ್ವವನ್ನು ವಿವರಿಸಿದರು. ಕೃಷಿ ಭೂಮಿಯ ಆರೋಗ್ಯವನ್ನು ಕಾಪಾಡಲು ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದ್ದು, ಇದು ಮಣ್ಣಿನ ಪೋಷಕಾಂಶಗಳ ಸಮತೋಲನ ಕಾಪಾಡಲು ಹಾಗೂ ರೈತರ ಆದಾಯ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಜಂಟಿ ಕೃಷಿ ನಿರ್ದೇಶಕ ಡಾ. ವಿಶಾಕಾಂತ ಮಾತನಾಡಿ ಕೃಷಿ ಜಮೀನಿನಲ್ಲಿ ಬಹುವರ್ಷಾಯು ಸಸ್ಯಗಳನ್ನು ಬೆಳೆಸುವುದರಿಂದ ಮಣ್ಣಿನ ಆರೋಗ್ಯ ಕಾಪಾಡುವಿಕೆ, ನೀರಿನ ಸಂರಕ್ಷಣೆ ಹಾಗೂ ಪರಿಸರ ಸಮತೋಲನ ಸಾಧಿಸಬಹುದೆಂದು ತಿಳಿಸಿದರು. ತಮ್ಮ ಸ್ವಂತ ಕೃಷಿ ಕ್ಷೇತ್ರದಲ್ಲಿ ಅನುಸರಿಸುತ್ತಿರುವ ಸಮಗ್ರ ಬೆಳೆ ನಿರ್ವಹಣಾ ಪದ್ಧತಿಗಳ ಅನುಭವವನ್ನು ರೈತರೊಂದಿಗೆ ಹಂಚಿಕೊAಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಜಂಟಿ ಕೃಷಿ ನಿರ್ದೇಶಕ ಡಾ. ಕೆ.ಹೆಚ್. ರವಿ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಕೃಷಿ ಭೂಮಿ ಉಳಿಸಿ ಅಭಿಯಾನದ ಮಹತ್ವವನ್ನು ವಿವರಿಸಿದರು. ಸಾವಯವ ಗೊಬ್ಬರಗಳ ಬಳಕೆ, ಮಣ್ಣಿನ ಪರೀಕ್ಷೆ ಆಧಾರಿತ ಪೋಷಕಾಂಶ ನಿರ್ವಹಣೆ, ಮಣ್ಣಿನಲ್ಲಿರುವ ಸೂಕ್ಷ÷್ಮಜೀವಿಗಳ ಪಾತ್ರ, ಮಣ್ಣು ಮತ್ತು ನೀರಿನ ಸಂರಕ್ಷಣಾ ಕ್ರಮಗಳು, ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸುವ ವಿಧಾನಗಳು, ಎರೆಹುಳುಗಳ ಮಹತ್ವ, ಹನಿ ನೀರಾವರಿ ಮತ್ತು ತುಂತುರು ನೀರಾವರಿ ವ್ಯವಸ್ಥೆಗಳ ಬಳಕೆ, ಬೆಳೆ ವಿಮೆಯ ಅಗತ್ಯತೆ ಹಾಗೂ ಬಹುಬೆಳೆ ಪದ್ಧತಿಗಳ ಮಹತ್ವದ ಕುರಿತು ರೈತರಿಗೆ ಸಮಗ್ರ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಡ್ಯದ ವಿಸಿ ಫಾರಂನ ಕೃಷಿ ವಿಜ್ಞಾನಿ ಡಾ. ಸುನೀಲ್ ಮಾತನಾಡಿ, ಎಲ್-ನಿನೋ ಪರಿಣಾಮದಿಂದ ದೇಶದಲ್ಲಿ ಮಳೆಯ ವಿಳಂಬ ಹಾಗೂ ಮಳೆ ಕೊರತೆಯ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ರೈತರು ಸಿರಿಧಾನ್ಯಗಳು, ಕಡಿಮೆ ಅವಧಿಯ ಬೆಳೆಗಳು ಹಾಗೂ ಕಡಿಮೆ ನೀರಿನ ಅವಶ್ಯಕತೆ ಹೊಂದಿರುವ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಜೊತೆಗೆ ಪ್ರಸಕ್ತ ಹವಾಮಾನಕ್ಕೆ ಸೂಕ್ತವಾದ ವಿವಿಧ ಬೆಳೆ ತಳಿಗಳು ಹಾಗೂ ಬಹುಬೆಳೆ ಪದ್ಧತಿಗಳ ಬಗ್ಗೆ ಮಾಹಿತಿ ನೀಡಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು ಕಾರ್ಯದರ್ಶಿ ಡಾ. ರವೀಂದ್ರ ಮಾತನಾಡಿ, ಹಸಿರು ಗೊಬ್ಬರದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಹಸಿರು ಗೊಬ್ಬರದಿಂದ ಮಣ್ಣಿನ ಫಲವತ್ತತೆ ಹೆಚ್ಚುವುದು, ಮಣ್ಣಿನಲ್ಲಿ ತೇವಾಂಶ ಸಂರಕ್ಷಣೆ ಸಾಧ್ಯವಾಗುವುದು ಹಾಗೂ ಬೆಳೆಗಳ ಉತ್ಪಾದಕತೆ ಹೆಚ್ಚುವುದರ ಕುರಿತು ರೈತರಿಗೆ ವಿವರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಐಸಿಎಆರ್-ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ಥೂರಿನ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಜ್ಞಾನೇಶ್ ಬಿ.ಎನ್. ಅವರು ಜೂನ್ ತಿಂಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಕೃಷಿ ಭೂಮಿ ಉಳಿಸಿ ಅಭಿಯಾನದ ಉದ್ದೇಶ ಮತ್ತು ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಭೂಮಿಯ ಫಲವತ್ತತೆಯನ್ನು ಕಾಪಾಡುವುದು, ಮಣ್ಣಿನ ಆರೋಗ್ಯ ಸುಧಾರಿಸುವುದು ಹಾಗೂ ಸುಸ್ಥಿರ ಕೃಷಿ ಪದ್ಧತಿಗಳನ್ನು ರೈತರು ಅಳವಡಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ರೈತ-ವಿಜ್ಞಾನಿಗಳ ಸಂವಾದವನ್ನು ಏರ್ಪಡಿಸಲಾಗಿದ್ದು, ರೈತರು ತಮ್ಮ ಬೆಳೆ ಸಮಸ್ಯೆಗಳು, ಹವಾಮಾನ ವೈಪರೀತ್ಯಗಳು ಹಾಗೂ ಮಣ್ಣಿನ ಆರೋಗ್ಯ ನಿರ್ವಹಣೆ ಕುರಿತು ಪ್ರಶ್ನೆಗಳನ್ನು ಕೇಳಿದರು. ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶ್ರೀ ಶಾಮರಾಜ್, ಡಾ. ವಿನಯ್ ಜಿ.ಎಂ., ಡಾ. ಪ್ರಸಾದ್ ವೈ.ಪಿ., ಡಾ. ರಕ್ಷಿತ್ ರಾಜ್ ಹಾಗೂ ಡಾ. ದೀಪಕ್ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ. ರಾಜು, ನಾಗನಹಳ್ಳಿ ಡಿಎಟಿಸಿ ಉಪ ನಿರ್ದೇಶಕ ಡಾ. ನಾಗೇಂದ್ರ, ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ಡೀನ್ ಡಾ. ರಾಜಗೋಪಾಲ್, ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕ ಸತೀಶ್, ಕೃಷಿ ತಂತ್ರಜ್ಞರ ಸಂಸ್ಥೆಯ ಸದಸ್ಯರು, ಎಟಿಎಂಗಳು, ಬಿಟಿಎಂಗಳು, ಕೃಷಿ ಸಖಿಯರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಕೃಷಿ ಭೂಮಿಯ ಆರೋಗ್ಯ ಕಾಪಾಡುವಿಕೆ, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕೃಷಿ ಪದ್ಧತಿಗಳ ಅಳವಡಿಕೆ ಹಾಗೂ ಸುಸ್ಥಿರ ಕೃಷಿ ಅಭಿವೃದ್ಧಿಗೆ ಈ ಕಾರ್ಯಕ್ರಮವು ಮಹತ್ವದ ವೇದಿಕೆಯಾಗಿತ್ತು ಎಂದು ಸಂಘಟಕರು ತಿಳಿಸಿದರು.