
ಮೈಸೂರು: ಕೇಂದ್ರ ಸರ್ಕಾರ ಅಥವಾ ನ್ಯಾಯಾಲಯದಿಂದ ಮಾತ್ರ ಪರಿಶಿಷ್ಟ ಪಂಗಡದ ಮೀಸಲಾತಿ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ, ಸತೀಶ್ ಜಾರಕಿಹೊಳಿ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದ ಹೋರಾಟದ ಫಲವಾಗಿ ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ 7 ಹೆಚ್ಚಿಸಲಾಯಿತು. ಇದಕ್ಕೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಇದರಿಂದಾಗಿ ಸಮಸ್ಯೆ ಸೃಷ್ಟಿಯಾಗಿದ್ದು, ಕೇಂದ್ರ ಸರ್ಕಾರವು ಸಂವಿಧಾನದ ಶೆಡ್ಯೂಲ್ 9ಕ್ಕೆ ಈ ಮೀಸಲಾತಿ ಪ್ರಮಾಣದ ಹೆಚ್ಚಳದ ಕುರಿತು ಸೇರ್ಪಡೆ ಮಾಡಿ, ಕಾನೂನಿನ ಮಾನ್ಯತೆ ಕಲ್ಪಿಸಿಕೊಡಬೇಕಿದೆ.ಇಲ್ಲವೇ, ಈ ಕುರಿತು ಸುಪ್ರೀಂ ಕೋರ್ಟ್ ಆದೇಶ ನೀಡಬೇಕಿದೆ. ಆಗಲೇ ಈ ಸಮಸ್ಯೆ ಬಗೆಹರಿಯಲಿದೆ ಇಲ್ಲವಾದರೆ, ಕಷ್ಟಕರ ಎಂದರು.
ಡಾ.ಬಿ.ಆರ್.ಅAಬೇಡ್ಕರ್ ಅವರ ಕುರಿತು ಅಧ್ಯಯನ ಮಾಡಿ ಅವರ ಆಲೋಚನೆ, ಚಿಂತನೆ, ಆದರ್ಶವನ್ನು ಅರಿತುಕೊಂಡರೆ ನಾಯಕನಾಗಿ,
ರಾಜ ಕಾರಣಿಯಾಗಿ ಅಧಿಕಾರಿಯಂತಹ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ನಮ್ಮ ಬದುಕು ನಮ್ಮ ಕೈಯಲ್ಲಿ ಇದೆ. ಇಚ್ಛಾಶಕ್ತಿ ಇದ್ದರೆ ಎಂತಹ ಕಠಿಣ ಸಮಸ್ಯೆ ಗಳನ್ನಾದರೂ ಎದುರಿಸಿ ಮುಂದುವರಿಯಬಹುದು. ಇತಿಹಾಸ ಅರಿತರೆ ಬದುಕಲು ಸಾಧ್ಯ ಎಂದು ಹೇಳಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ ಮೈಸೂರಿನಲ್ಲಿ ಒಂದೇ ಎಸ್ಟಿ ಹಾಸ್ಟೆಲ್ ಇದೆ. ಇದು ಸಾಕಾಗುತ್ತಿಲ್ಲ. ಇನ್ನೂ 2 ಹಾಸ್ಟೆಲ್ಗಳು ಬೇಕಾಗಿವೆ. ಜಾಗ ಗುರುತಿಸಿ, ಹಾಸ್ಟೆಲ್ ನಿರ್ಮಾಣಕ್ಕೆ ಸಚಿವ ಸತೀಶ ಜಾರಕಿಹೊಳಿ ಅವರು ಅನುಮೋದನೆ ಕೊಡಿಸಬೇಕು. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ ಎಂದು ಮನವಿ ಮಾಡಿದರು.
ಶಾಸಕ ಕೆ.ಹರೀಶ್ಗೌಡ ಮಾತನಾಡಿ, ಶಿಕ್ಷಣದಿಂದ ಮಾತ್ರ ವ್ಯಕ್ತಿ, ಮನೆ, ಸಮಾಜ ಮತ್ತು ದೇಶ ಪ್ರಗತಿಯಾಗಲು ಸಾಧ್ಯ. ವಿದ್ಯಾವಂತರಾದರೆ ಸೌಲಭ್ಯ, ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮವಾಗಿ ಓದಬೇಕು ಎಂದು ತಿಳಿಸಿದರು.
ಇದೇ ವೇಳೆ ಅತಿ ಹೆಚ್ಚು ಅಂಕ ಪಡೆದ 560 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಶಾಸಕ ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ನಗರಪಾಲಿಕೆ ಮಾಜಿ ಸದಸ್ಯ ಲೋಕೇಶ್(ಪಿಯಾ), ವೇದಿಕೆಯ ಅಧ್ಯಕ್ಷ ದೇವರಾಜು ಟಿ.ಕಾಟೂರು, ಉದ್ದೂರು ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.