
ಮೈಸೂರು; ಬಿಡದಿ ಟೌನ್ ಶಿಪ್ ನಿಲ್ಲಿಸಿ, ಫಲವತ್ತಾದ ರೈತರ ಜಮೀನು ಉಳಿಸುವುದು ಸ್ಭೆರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಮೈಸೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ಧರಣಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಡದಿಯ ಸುತ್ತಮುತ್ತಲ ಹಳ್ಳಿಗಳ ರೈತರ ಫಲವತ್ತಾದ 7500 ಎಕ್ಕರೆ ಜಮೀನುಗಳನ್ನು ವಶಪಡಿಸಿಕೊಂಡು, ಬಂಡವಾಳ ಶಾಹಿಗಳಿಗೆ ಅನುಕೂಲವಾಗಲಿ ಎಂದು ಟೌನ್ಶಿಪ್ ಮಾಡಲು ಮುಂದಾಗಿರುವುದು ಸರಿಯಾದ ಕ್ರಮ ಅಲ್ಲ. ಈ ಭೂಮಿಯಲ್ಲಿರುವ ಸಾವಿರಾರು ತೆಂಗು ಅಡಿಕೆ ಮರಗಳನ್ನು ಕಡಿದು, ಪರಿಸರ ಮಾರಕ ನೀತಿ ಅನುಸರಿಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಜಮೀನು ಮಾಲಿಕತ್ವದ ರೈತರು 470 ದಿನಗಳಿಂದ ಸರ್ಕಾರಕ್ಕೆ ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಹೋರಾಟ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ರೈತರ ಮನವಿಯನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ÷್ಯ ಮಾಡುವುದು ಖಂಡನೀಯ ಎಂದರು.
ಮುಖ್ಯಮಂತ್ರಿಗಳು ಪ್ರಜಾ ಸೇವಕರು ಪ್ರಜೆಗಳ ಅಭಿಪ್ರಾಯವನ್ನು ಧಿಕ್ಕರಿಸಿ, ಆಡಳಿತ ನಡೆಸಬಾರದು. ಇಂತಹ ವಿಚಾರದಲ್ಲಿ ರಾಜಕೀಯ ಪಕ್ಷಗಳ ಕಿತ್ತಾಟಕ್ಕೆ ರೈತರು ಕೂಡ ಬಲಿಯಾಗಬಾರದು ಎಂಬ ಅರಿವಿರಲಿ. ಕರ್ನಾಟಕದ ಬರ ಪರಿಸ್ಥಿತಿಯಲ್ಲಿ ರೈತರನ್ನು ರಕ್ಷಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದ ತೀವ್ರ ಬರ ಪರಿಸ್ಥಿತಿ ಉಂಟಾಗಿದೆ. ಕೃಷಿ, ತೋಟಗಾರಿಕೆ ಮತ್ತು ಜಾನುವಾರು ಸಾಕಾಣಿಕೆ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿದ್ದು, ರೈತರು ಆರ್ಥಿಕವಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜನ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಹಲವೆಡೆ ಗಂಭೀರವಾಗಿದೆ.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಕ್ಕೋತ್ತಾಯಗಳು:
- ಬರಪೀಡಿತ ಪ್ರದೇಶಗಳನ್ನು ವೈಜ್ಞಾನಿಕ ಸಮೀಕ್ಷೆಯ ಆಧಾರದ ಮೇಲೆ ತಕ್ಷಣ ಘೋಷಿಸಬೇಕು.
- ರೈತರಿಗೆ ಸಮರ್ಪಕ ಬರ ಪರಿಹಾರವನ್ನು ವಿಳಂಬವಿಲ್ಲದೆ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.
- ಕೃಷಿ ಸಾಲಗಳ ಮರುಪಾವತಿಗೆ ವಸೂಲಾತಿ ನಿಲ್ಲಿಸಬೇಕು. ಹಾಗೂ ಬಡ್ಡಿ ಮನ್ನಾ ಮಾಡಬೇಕು.
- ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸರ್ಕಾರದಿಂದ ತುರ್ತಾಗಿ ಕಲ್ಪಿಸಬೇಕು.
- ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಬೇಕು.
- ಬೆಳೆ ವಿಮೆ ಪರಿಹಾರವನ್ನು ತ್ವರಿತವಾಗಿ ರೈತರಿಗೆ ವಿತರಿಸಬೇಕು.
- ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಹಾಗೂ ಇತರೆ ಪರ್ಯಾಯ ವ್ಯವಸ್ಥೆಗಳನ್ನು ಒದಗಿಸಬೇಕು ಎಂದು ಒತ್ತಾಯಿಸಲಾಯಿತು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮುಖಂಡರುಗಳಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮೂಕ್ಕಳ್ಳಿ ಮಹದೇವಸ್ವಾಮಿ, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಪಟೇಲ್ ಶಿವಮೂರ್ತಿ, ಸತೀಶ್, ಗುರುಸ್ವಾಮಿ, ಕುರುಬೂರು ಸಿದ್ದೇಶ್, ವಿಜಯೇಂದ್ರ, ಉಡಿಗಾಲ ರೇವಣ್ಣ, ಸುಂದರಪ್ಪ, ಕೆಂಡಗಣಪ್ಪ,ಕುರುಬೂರು ಪ್ರದೀಪ್, ಗೌರಿಶಂಕರ್, ಬಿ.ಪಿ. ಪರಶಿವಮೂರ್ತಿ, ಕೋಟೆ ಸುನೀಲ್, ಮಿಲಿಟರಿ ಕುಮಾರ್, ದೊಡ್ಡ ಕಾಟೂರು ಮಹದೇವಸ್ವಾಮಿ, ಕಾಟೂರು ನಾಗೇಶ್, ಸಾತಗಳ್ಳಿ ಬಸವರಾಜ, ಅಂಬಳೆ ಮಂಜುನಾಥ್, ವಾಜಮಂಗಲ ಮಹಾದೇವ, ಶಿವಣ್ಣ, ಹೆಗ್ಗೊಠಾರ ಶಿವಸ್ವಾಮಿ, ಉಮೇಶ್, ನಾಗೇಂದ್ರ, ನಂಜುAಡ, ಕೆಂಡಗಣಸ್ವಾಮಿ, ಮಂಜೇಶ್, ಶಿವಪ್ರಸಾದ್ ಸೇರಿದಂತೆ 250 ಕ್ಕೂ ರೈತರು ಭಾಗವಹಿಸಿದ್ದರು.