
ಪಿರಿಯಾಪಟ್ಟಣ: ಅಲ್ಪಸಂಖ್ಯಾತ ಹಿಂದೂಗಳ ಹಾಗೂ ದಲಿತ ಸಮುದಾಯದ ಹೆಸರು ಹೇಳಿಕೊಂಡು ಅಧಿಕಾರದ ರುಚಿ ಸವಿಯುತ್ತಿರುವ ಕಾಂಗ್ರೆಸ್ ಪಕ್ಷವು ಆ ವರ್ಗದವರಿಗೆ ಅನ್ಯಾಯವೆಸಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಆರ್. ರಘು ಕೌಟಿಲ್ಯ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅಹಿಂದ ಹೆಸರು ಹೇಳಿಕೊಂಡು ಅವರ ಮತ ಗಳಿಸಿಕೊಳ್ಳುತ್ತಿದೆಯೇ ಹೊರತು ಆ ಸಮುದಾಯಗಳಿಗೆ ನಿಜವಾಗಿಯೂ ಏನು ಮಾಡಲಿಲ್ಲ ಕಡೇ ಪಕ್ಷ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಕಿಂಚಿತ್ತೂ ಅನುದಾನ ಬಿಡುಗಡೆ ಮಾಡಲಿಲ್ಲ. ರಾಜ್ಯದಲ್ಲಿ ಜಾತಿ ಗಣತಿ ಹೆಸರಿನಲ್ಲಿ ರಾಜ್ಯವನ್ನು ಹಾಳು ಮಾಡಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿ 650 ಕೋಟಿ ಅನುದಾನ ಬಿಡುಗಡೆ ಮಾಡಿ ಸಾರ್ವಜನಿಕರ ಹಣವನ್ನು ನುಂಗಿ ನೀರು ಕುಡಿದು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭದಲ್ಲಿ ಅದನ್ನು ಸ್ವೀಕರಿಸಿದರೂ ಹಿಂದುಳಿದ ವರ್ಗಗಳಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಕಾಂಗ್ರೆಸ್ ಕಾರ್ಯಕರ್ತರ ಗಂಜಿ ಕೇಂದ್ರ:
ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಬಡವರ ಉದ್ದಾರ ಮಾಡುತ್ತಿದ್ದೇವೆ ಎಂದು ಡಂಗುರ ಸಾರುವ ಈ ಕಾಂಗ್ರೆಸ್ ಸರ್ಕಾರ, ಒಳಗೊಳಗೆ ತನ್ನ ಪಕ್ಷದ ಅತೃಪ್ತ ಕಾಂಗ್ರೆಸ್ ನಾಯಕರಿಗೆ ಲಕ್ಷ ಲಕ್ಷ ರೂಪಾಯಿ ಸಂಬಳದ ಉಡುಗೊರೆ ನೀಡುತ್ತಾ ಕಾಂಗ್ರೆಸ್ ಕಾರ್ಯಕರ್ತರ ಗಂಜಿ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಗ್ಯಾರೆಂಟಿ ಅನುಷ್ಠಾನ ಸಮಿತಿ ಹೆಸರಿನಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಿನಲ್ಲಿ ಅವರ ಕಾರ್ಯಕರ್ತರ ಜೇಬನ್ನು ತುಂಬುತ್ತಿದೆ. ದೇಶದಲ್ಲಿ ನಿಜವಾಗಿಯೂ ಸಾಮಾಜಿಕ ಬದ್ಧತೆ ಇರುವುದು ಬಿಜೆಪಿಯಲ್ಲಿ ಮಾತ್ರ. ಅತಿ ಸಣ್ಣ ಸಮುದಾಯಗಳು ಮತ್ತು ಕಾಯಕ ಸಮುದಾಯಗಳನ್ನು ಗುರುತಿಸಿ ಆ ಸಮುದಾಯಗಳಿಗೆ ರಾಜಕೀಯವಾಗಿ ಅವಕಾಶ ಕೊಡುತ್ತಿದೆ. ಕ್ರಿಯಾಶೀಲ ಕಾರ್ಯಕರ್ತರಿಗೆ ಪ್ರಾಮಾಣಿಕವಾಗಿ ಅವಕಾಶ ಕೊಡುತ್ತದೆ ಎನ್ನುವುದಕ್ಕೆ ನಾನೊಬ್ಬ ಉದಾಹರಣೆ. ಎರಡು ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿತ್ತು, ಕೊನೆ ಕ್ಷಣದಲ್ಲಿ ಸೋತಿದ್ದೆ. ಇದರಿಂದಾಗಿ ವೈಯಕ್ತಿಕ ಬದುಕಿನಲ್ಲಿ ಅನೇಕ ಕಷ್ಟ–ನಷ್ಟಗಳು ಎದುರಾಗಿದ್ದವು. ಆದರೆ, ನನ್ನಂತಹ ಕಾರ್ಯಕರ್ತ ಪಾತಾಳಕ್ಕೆ ಬಿದ್ದರೂ ಬಿಜೆಪಿ ಮೇಲೆತ್ತುತ್ತದೆ ಎಂಬ ಆತ್ಮವಿಶ್ವಾಸ ಇತ್ತು, ನನ್ನಂತ ಕಾರ್ಯಕರ್ತರು ಎಷ್ಟೇ ಕೆಳಗೆ ಬಿದ್ದರೂ ಮೇಲೆತ್ತುವ ಶಕ್ತಿ ಬಿಜೆಪಿ ಪಕ್ಷಕ್ಕಿದೆ, ಅದೇ ರೀತಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲುವುದಕ್ಕೂ ಸಾಧ್ಯವಿಲ್ಲದ ಅನೇಕ ಕಾಯಕ ಸಮುದಾಯಗಳನ್ನು ವಿಧಾನಸಭೆ, ಲೋಕಸಭೆಗೆ ಕಳುಹಿಸುವ ಕೆಲಸವನ್ನು ಪಕ್ಷ ಮಾಡುತ್ತಿದೆ. ಮೈಸೂರು ಭಾಗದಲ್ಲಿ ಸಂಘಟನೆ ಬಲಗೊಳಿಸಲು ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಪಕ್ಷವು ನನಗೆ ಅವಕಾಶ ಮಾಡಿಕೊಟ್ಟಿದೆ. ಅವಕಾಶದ ಬಾಗಿಲು ತೆಗೆದುಕೊಡುವ ಬದ್ಧತೆ, ಸಿದ್ಧತೆ ಹಾಗೂ ಕಾರ್ಯಸೂಚಿ ಇರುವ ಪಕ್ಷ ಎಂಬುದನ್ನು ವರಿಷ್ಠರು ಮತ್ತೊಮ್ಮೆ ನಿರೂಪಿಸಿದ್ದಾರೆ. ಮಾತೃ ಹೃದಯದಿಂದ ನಡೆದುಕೊಂಡಿದ್ದಾರೆ. ಹಲವು ಅವಕಾಶಗಳನ್ನು ನೀಡಿದ್ದಾರೆ. ನನ್ನ ಕಡೆಯ ಉಸಿರು ಇರುವವರೆಗೂ ಪಕ್ಷದ ಕೆಲಸ ಮಾಡುವುದಕ್ಕೆ ಹೆಮ್ಮೆಯಾಗುತ್ತದೆ. ಇದಕ್ಕಾಗಿ ಋಣಿ ಆಗಿರುತ್ತೇನೆ. ರಾಜ್ಯದಾದ್ಯಂತ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಹೋರಾಡುತ್ತಿದ್ದು, ಅದನ್ನು ಮುಂದುವರಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ರಾಜೇಂದ್ರ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಎಂ.ಎಂ.ರಾಜೇಗೌಡ, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಹೆಮ್ಮಿಗೆ ರವಿ, ಚನ್ನಬಸವರಾಜು, ಮುಖಂಡರಾದ ಆರ್.ಟಿ.ಸತೀಶ್, ಲೋಕಪಾಲಯ್ಯ, ಹೆಚ್.ಸಿ.ವೀರಭಧ್ರ, ಉಪಸ್ಥಿತರಿದ್ದರು.