ಸರ್ಕಾರಿ ನೌಕರರ ಸಂಘದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ : ಹೊಸಹಳ್ಳಿ ಕೃಷ್ಣೇಗೌಡ

ಪಿರಿಯಾಪಟ್ಟಣ : ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪಿರಿಯಾಪಟ್ಟಣ ಅಧ್ಯಕ್ಷ ಹೊಸಹಳ್ಳಿ ಕೃಷ್ಣೇಗೌಡ ತಿಳಿಸಿದರು.
ಪಟ್ಟಣದ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜುಲೈ 11 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರು ಹಾಗೂ ಉಪ ಮುಖ್ಯಮಂತ್ರಿಗಳಾದ ಜಿ ಪರಮೇಶ್ವರ್ ರವರಿಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ‘ನಮ್ಮಭಿಮಾನದ ಅಭಿನಂದನೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದರ ಜೊತೆಗೆ NPS ರದ್ದುಪಡಿಸಿ OPS ಜಾರಿಗೊಳಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಮಾಡಿ NPS ರದ್ದುಗೊಳಿಸುವಂತೆ ಮನವಿ ಮಾಡಲಾಗುವುದು. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವುದು ಮತ್ತು ಸರ್ಕಾರಿ ನೌಕರರಿಗೆ ಕಾಮ್ಸ್ ನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಮನನ ಮಾಡಿಕೊಡುವುದರ ಜೊತೆಗೆ ಬಿ ಎಲ್ ಓ ಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದು. ಈ ಕಾರ್ಯಕ್ರಮಕ್ಕೆ ಪಿರಿಯಾಪಟ್ಟಣದಿಂದ ಬೆಂಗಳೂರಿಗೆ ಹೋಗಿ ಬರಲು ಬಸ್ಸಿನ ವ್ಯವಸ್ಥೆ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ನೌಕರ ಬಂಧುಗಳು ಆಗಮಿಸಬೇಕು. ಅಂದು ಬೆಳಿಗ್ಗೆ 5 ಗಂಟೆಗೆ ಪಿರಿಯಾಪಟ್ಟಣದ ಬಸ್ ನಿಲ್ದಾಣದ ಮುಂಭಾಗದಿಂದ ಬಸ್ ಹೊರಡಲಿದ್ದು, ದಯಮಾಡಿ ಸಕಾಲದಲ್ಲಿ ಎಲ್ಲಾ ನೌಕರರು ಮತ್ತು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ತಿಂಡಿ ಊಟದ ವ್ಯವಸ್ಥೆ ಇದ್ದು, ದಯವಿಟ್ಟು ಸಕಾಲದಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಎಲ್ಲರಲ್ಲೂ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ಧರ್ಮಪಾಲ , ಖಜಾಂಚಿ ಶ್ರೀನಿವಾಸ್ ಎಂ, ರಾಜ್ಯ ಪರಿಷತ್ ಸದಸ್ಯ ದೇವರಾಜ್ ಎಂ ಡಿ, ನಿರ್ದೇಶಕರಾದ ಪ್ರಕಾಶ್, ಶೇಖರ್ ಸೇರಿದಂತೆ ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ನಿರ್ದೇಶಕರು ಹಾಜರಿದ್ದರು.