
ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಉದ್ಯೋಗಾಕಾಂಕ್ಷಿಗಳ ಮನಸ್ಸಿನಲ್ಲಿರುವ ಭಯ ಮತ್ತು ಆತಂಕವನ್ನು ಹೋಗಲಾಡಿಸಲು ಅಣುಕು ಪರೀಕ್ಷೆಗಳು ಹೆಚ್ಚು ಸಹಕಾರಿಯಾಗಲಿವೆ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕ ಎಸ್.ಎಲ್. ಚೆನ್ನಬಸವಣ್ಣ ಹೇಳಿದರು.
ಶುಕ್ರವಾರ ಮೈಸೂರಿನ ನಗರ ಕೇಂದ್ರ ಗ್ರಂಥಾಲಯದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಅಣುಕು ಪರೀಕ್ಷೆಗೆ ಚಾಲನೆ ನೀಡಿ, ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮೈಸೂರಿನ ನಗರ ಕೇಂದ್ರ ಗ್ರಂಥಾಲಯವು ಹಮ್ಮಿಕೊಂಡಿರುವ ಈ ಅಣುಕು ಪರೀಕ್ಷೆಗಳ ಸರಣಿ ಅತ್ಯಂತ ವಿಶೇಷವಾದುದಾಗಿದೆ. ಇದು ಬಡ ಹಾಗೂ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಗೆ ಸೇರಲು ಇಚ್ಛಿಸುವವರು ಕೇವಲ ಉದ್ಯೋಗಕ್ಕಾಗಿ ಬರಬಾರದು. ಸೇವೆಗೆ ಸೇರ್ಪಡೆಗೊಂಡ ನಂತರ ಇಲಾಖೆಯ ವರ್ಚಸ್ಸು ಮತ್ತು ಘನತೆಯನ್ನು ಹೆಚ್ಚಿಸುವಂತೆ ನಡೆದುಕೊಳ್ಳಬೇಕು. ಶಿಷ್ಟ ರಕ್ಷಣೆ, ದುಷ್ಟರ ನಿಗ್ರಹ ಎಂಬುದು ಕೇವಲ ಘೋಷವಾಕ್ಯವಾಗುಳಿಯದೆ, ಅದು ಪ್ರತಿಯೊಬ್ಬರ ಕರ್ತವ್ಯದ ಮಂತ್ರವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ್ ಬಿ. ಮಾತನಾಡಿ, ನಮ್ಮ ಗ್ರಂಥಾಲಯ ನಡೆಸುತ್ತಿರುವ ಈ ಅಣುಕು ಪರೀಕ್ಷೆಗಳು ರಾಜ್ಯದ ಗಮನ ಸೆಳೆದಿವೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯು ತಮ್ಮ ವಸತಿ ನಿಲಯಗಳಲ್ಲಿರುವ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳಿಗೂ ಇಂತಹ ಅಣುಕು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಓದುವ ಸಾಮಗ್ರಿಗಳನ್ನು ನೀಡಿ ಸಹಕರಿಸುವಂತೆ ಕೋರಿವೆ. ಈ ನಿಟ್ಟಿನಲ್ಲಿ ನಮ್ಮ ಗ್ರಂಥಾಲಯ ಹಾಗೂ ಬೆಂಗಳೂರಿನ ಜ್ಞಾನಗಂಗೋತ್ರಿ ಸಂಸ್ಥೆಯು ಜಂಟಿಯಾಗಿ ಆ ಸಂಸ್ಥೆಗಳ ವಿದ್ಯರ್ಥಿಗಳಿಗೆ ನೆರವು ನೀಡಲು ಮುಂದಾಗಿದೆ ಎಂದು ಹೇಳಿದರು.
ವೈ.ವಿ. ಗಾಯತ್ರಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಭ್ಯರ್ಥಿಗಳು ಹೇಗೆ ಸಿದ್ಧರಾಗಬೇಕು, ಸಮಯ ನಿರ್ವಹಣೆ ಮತ್ತು ಏಕಾಗ್ರತೆಯನ್ನು ಹೇಗೆ ಕಾಯ್ದುಕೊಳ್ಳಬೇಕು ಎಂಬ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ರಮೇಶ್ ನರಸಯ್ಯ ಮತ್ತಿತರರು ಉಪಸ್ಥಿತರಿದ್ದರು.