
ಮೈಸೂರು; ಉತ್ತಮ ಸಮಾಜ ನಿರ್ಮಾಣಕ್ಕೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ ಎಂದು ಸಂಸ್ಕೃತಿ ಚಿಂತಕ ನಿತ್ಯಾನಂದ ಎಸ್ ಬಿ ಹೇಳಿದರು.
ಗುರುವಾರ ಮೈಸೂರಿನ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ 2026- 27 ನೇ ಸಾಲಿನ ಸಾಂಸ್ಕೃತಿಕ ಸಾಹಿತ್ಯಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು , ವಿದ್ಯಾರ್ಥಿಗಳು ಶ್ರೇಷ್ಠವಾದ ಗುರಿಯನ್ನು ಹೊಂದಿ, ಸತತವಾದ ಪರಿಶ್ರಮದಿಂದ ಸಾಧಿಸುವುದಕ್ಕೆ ಸಾಧ್ಯವಿದೆ ಎಂದರು.
ಮನುಷ್ಯನು ಸರಿ ಹೋದರೆ ಬೇರೆಲ್ಲವೂ ಸರಿ ಹೋಗುವುದು ಎಂದು ತಿಳಿದು, ದೇಶವನ್ನು ಬದಲಾಯಿಸದೆ ನಮ್ಮನ್ನು ಬದಲಾಯಿಸಿಕೊಂಡರೆ, ದೇಶದ ಪ್ರಗತಿ ಸಾಧ್ಯವಿದೆ ಎಂದು ತಿಳಿಸಿದರು. ಶ್ರೇಷ್ಠಸಾಧಕರ ಬದುಕಿನ ಸಾಧನೆಯನ್ನು ಅಧ್ಯಯನ ಮಾಡಿ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಂತಾರಾಷ್ಟ್ರೀಯ ಕ್ರೀಡಾಪಟು ರೀನಾ ಜಾರ್ಜ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಸತತ ಪರಿಶ್ರಮದಿಂದ ಗುರಿಯನ್ನು ಸಾಧಿಸಿ ಎಂದರು.
ಯುವ ಉದ್ಯಮಿ ವಿದ್ಯಾ ಎಂ.ಆರ್ ಮಾತನಾಡಿ, ವ್ಯಕ್ತಿತ್ವ ವಿಕಸನ ಹೊಂದಲು ಉತ್ತಮ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಗುರು ಹಿರಿಯರಿಗೆ ಪೋಷಕರಿಗೆ ಕೀರ್ತಿಯನ್ನು ತರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಡಾ. ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಯನ್ನು ಸ್ಮರಿಸಿಕೊಂಡರು. ವಿದ್ಯಾರ್ಥಿಗಳು ಸೃಜನಶೀಲತೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಸಮೂಹ ಮಾಧ್ಯಮವನ್ನು ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಬಳಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಪ್ರಾಚಾರ್ಯ ಡಾ. ರೇಚಣ್ಣ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಪುಷ್ಪಲತಾ ಜೆ, ಕ್ರೀಡಾ ವೇದಿಕೆಯ ಸಂಚಾಲಕಿ ರಶ್ಮಿ ಎ, ಧಾತ್ರಿ, ನಮ್ರತಾ.ಪಿ , ಶುಭ ಎಂ, ತೃಪ್ತಿ ಡಿ.ವೈ ಉಪಸ್ಥಿತರಿದ್ದರು.
ಕಾಲೇಜಿನ ಅಧ್ಯಾಪಕರು ಹಾಗೂ ಅಧ್ಯಾಪಕೇತರ ವರ್ಗದವರು ಪಾಲ್ಗೊಂಡಿದ್ದರು.