Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಂಸ್ಕಾರ ಮತ್ತು ಸಾಹಿತ್ಯದಿಂದ ಮಾತ್ರ ಸನ್ಮಾರ್ಗದ ವ್ಯಕ್ತಿತ್ವ ನಿರ್ಮಾಣ; ಶಂಕರ ದೇವನೂರು

`
ಮೈಸೂರು: “ಸಂಸ್ಕಾರ ಮತ್ತು ಸಾಹಿತ್ಯದಿಂದ ಮಾತ್ರ ಸನ್ಮಾರ್ಗದ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು ಹೇಳಿದರು.
ಶನಿವಾರ ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 2026-27ನೇ ಸಾಲಿನ ಪೋಷಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಜನ್ಮದ ಸಾರ್ಥಕತೆಯನ್ನು ವಿವರಿಸಿದರು. ಹುಟ್ಟುವಾಗ ಮಗುವಾಗಿ ಬರುವ ಮನುಷ್ಯ ಬೆಳೆಯುತ್ತಾ ಸಾಧನೆಗಳನ್ನು ಮಾಡಿ, ಕೊನೆಗೆ ಸಮಾಜಕ್ಕೆ ಬೆಳಕಾಗುವುದೇ ನಿಜವಾದ ಜೀವನದ ಸಾರ್ಥಕತೆ ಎಂದು ಮಾರ್ಮಿಕವಾಗಿ ತಿಳಿಸಿದರು.
ಗಿಡದಲ್ಲಿ ಮೂಡುವ ಮೊಗ್ಗು ನಂತರ ಹೂವಾಗಿ ಅರಳಿ ತನ್ನ ಪರಿಮಳವನ್ನು ಪಸರಿಸುವಂತೆ, ಪ್ರತಿಯೊಬ್ಬರ ಜೀವನವೂ ಹೂವಿನಂತೆ ಅರಳಬೇಕು. ಸ್ಪಷ್ಟ ಉದ್ದೇಶವಿದ್ದರೆ ಮಾತ್ರ ಸಾಧನೆಯ ಹಾದಿಯಲ್ಲಿ ಸಾಗಲು ಸಾಧ್ಯ.
ಮಕ್ಕಳಿಗೆ ಸಾಹಿತ್ಯದ ಪರಿಚಯ ಮಾಡಿಕೊಡಬೇಕು, ಏಕೆಂದರೆ ಸಾಹಿತ್ಯವು ಬದುಕುವ ಕಲೆಯನ್ನು ಕಲಿಸುತ್ತದೆ. ಕೇವಲ ಅಂಕಗಳಿಸುವ ವಿದ್ಯಾವಂತ ಭ್ರಷ್ಟನಾಗಬಹುದು, ಆದರೆ ಉತ್ತಮ ಸಂಸ್ಕಾರ ಪಡೆದ ವ್ಯಕ್ತಿ ಜೀವನದಲ್ಲಿ ಎಂದಿಗೂ ಭ್ರಷ್ಟನಾಗಲಾರ. ಪೋಷಕರು ಮೊದಲು ತಮ್ಮ ನಡವಳಿಕೆಯಲ್ಲಿ ಆದರ್ಶಪ್ರಾಯರಾಗಿದ್ದು, ತಾವು ಬದುಕಿ ತೋರಿಸುವ ಮೂಲಕ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಕೇವಲ ಕಿವಿ ತೆರೆದರೆ ಸಾಲದು, ಸರಿಯಾದದ್ದನ್ನು ಆಲಿಸಬೇಕು. ಬಾಯಿಗೆ ಸೇವಿಸುವ ಆಹಾರ ಮಾತ್ರವಲ್ಲದೆ, ಕಣ್ಣು ಮತ್ತು ಕಿವಿಗಳ ಮೂಲಕ ಸ್ವೀಕರಿಸುವ ವಿಚಾರಗಳೂ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತವೆ. ಒತ್ತಡವಿಲ್ಲದ ಬದುಕು ಸುಸಂಸ್ಕೃತರಾಗಿಸುತ್ತದೆ. ಆದ್ದರಿಂದ ಪೋಷಕರು ಮಕ್ಕಳನ್ನು ಪ್ರೀತಿಯಿಂದ ಗೆಲ್ಲಬೇಕೇ ಹೊರತು ಒತ್ತಡದಿಂದಲ್ಲ ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೋಷಕರ ಸಂಘದ ಅಧ್ಯಕ್ಷ ಸುರೇಶ್ ಪಿ.ವಹಿಸಿದ್ದರು.
ಇದೇ ಸಂದರ್ಭದಲ್ಲಿ 2026-27ನೇ ಸಾಲಿನ ಪೋಷಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸೈಯದ್ ಇಬ್ರಾಹಿಂ ಮುಮ್ತಾಜ್ ಅಧ್ಯಕ್ಷರಾಗಿ, ಕುಮಾರಸ್ವಾಮಿ ಕಾರ್ಯದರ್ಶಿಯಾಗಿ, ಶಿವಪ್ಪ ವಿ ಖಾದುರ್, ರಮೇಶ್ ರಾವ್ ಸಿಂಧೂರ್, ಪರಶಿವಮೂರ್ತಿ ಜಿ, ವಾಣಿ, ಶಾನೋಸ್ ಖಾನ್, ತೇಜಾವತಿ, ಷಾಬಿರ್, ಕಪ್ಪುಗೊರಲಪ್ಪ, ಸಂಧ್ಯಾ, ಸಾಯೈದ್ ಐಶಾ ಸಾಬಾನ ಅವರುಗಳು ಪದಾಧಿಕಾರಿಗಳಾಗಿ ಆಯ್ಕೆಯಾದರು.
ಪೋಷಕರ ಸಂಘದ ಸಂಚಾಲಕ ಡಾ. ವಿನೋದಮ್ಮ, ಸಹ ಸಂಚಾಲಕರಾದ ಶ್ವೇತಾ ಆರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಆರ್. ತಿಮ್ಮೇಗೌಡ, ಉದ್ಘೋಷ್, ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಟಿ. ವಿಜಯಲಕ್ಷ್ಮಿ ಮುರಳೀಧರ್, ಪೋಷಕರ ಸಂಘದ ಕಾರ್ಯದರ್ಶಿ ಉಷಾ, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್.ಆರ್. ರಮೇಶ್, ಆಡಳಿತ ಮಂಡಳಿ ಸದಸ್ಯರು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ, ಪೋಷಕರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.