
• ಸಭಾಪತಿ ವಿಚಾರದಲ್ಲಿ ಕೀಳು ರಾಜಕೀಯ ಬೇಡ: ಖಾತೆ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ
ಮೈಸೂರು: ರಾಜ್ಯದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸುಧಾರಣೆ ತರುವ ಕೆಲಸ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೂ ಸಹ ಕರ್ನಾಟಕದಲ್ಲಿ ನಗರ ಪ್ರದೇಶವನ್ನು ಬಿಟ್ಟರೆ ಗ್ರಾಮೀಣ ಭಾಗದಲ್ಲಿ ಜನರ ಆರೋಗ್ಯದ ಕಾಳಜಿ ಮಾಡುತ್ತಿರುವುದು ಸರ್ಕಾರಿ ಆಸ್ಪತ್ರೆಗಳೇ. ಇವುಗಳ ಸುಧಾರಣೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಬೆಂಗಳೂರಿನ ಸ್ಟಾರ್ ಹೋಟೆಲ್ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿ, ಇದು ಕೇವಲ ಕ್ರಮ ತೆಗೆದುಕೊಳ್ಳುವುದಕ್ಕೆ ನಡೆದ ದಾಳಿಗಳಲ್ಲ, ಹೋಟೆಲ್ಗಳಲ್ಲಿ ಯಾವ ರೀತಿಯ ಆಹಾರ ಗ್ರಾಹಕರಿಗೆ ಸಿಗುತ್ತಿದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ಹಾಗು ಕೈಮೀರಿದರೆ ಕ್ರಮ ತೆಗೆದುಕೊಳ್ಳುವುದಾಗಿದೆ. ಹೋಟೆಲ್ಗಳಲ್ಲಿ ಆಹಾರ ಯಾವ ರೀತಿ ತಯಾರಾಗುತ್ತಿದೆ ಎಂಬುದು ಜನರಿಗೂ ಗೊತ್ತಾಗಬೇಕು. ಹೊಟೇಲ್ ಮಾಲೀಕರಿಗೂ ಗೊತ್ತಾಗಬೇಕು. ನಮ್ಮ ಉದ್ದೇಶ ಕ್ರಮ ತೆಗೆದುಕೊಳ್ಳುವುದಲ್ಲ, ಕೇಳಿದಷ್ಟು ಹಣ ಕೊಡುವ ಜನರಿಗೆ ಒಳ್ಳೆಯ ಆಹಾರ ಕೊಡುವುದು. ಆ ಮೂಲಕ ಆರೋಗ್ಯ ಕಾಪಾಡುವುದಾಗಿದೆ ಎಂದು ತಿಳಿಸಿದರು.
ಕೆಲವು ಹೋಟೆಲ್ಗಳ ಕಿಚನ್ಗಳಲ್ಲಿ ದಾಳಿ ಮಾಡಿದಾಗ ಸಿಕ್ಕ ವಸ್ತುಗಳ ಬಗ್ಗೆ ಜನರಿಗೆ ಗೊತ್ತಾಗಬೇಕು. ಇಲ್ಲಿ ಕ್ರಮಕ್ಕಿಂತ ಮುಂಚೆ ಜನರು ಜಾಗೃತರಾಗಬೇಕು. ಹೋಟೆಲ್ಗಳು ಮುಂಭಾಗದ ಡಿಸೈನ್ ಹಾಗೂ ಆಹಾರದ ಬಗ್ಗೆ ಮಾತ್ರ ತೋರಿಸುತ್ತಾರೆ. ಆದರೆ ಜನರಿಗೆ ಹೋಟೆಲ್ನವರು ಕಿಚನ್ ಕೂಡಾ ತೋರಿಸಬೇಕು. ಮೊದಲು ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜೊತೆಗೆ ಕ್ರಮವನ್ನೂ ತೆಗೆದುಕೊಳ್ಳುತ್ತೇವೆ ಎಂದರು.
ಸಭಾಪತಿ ವಿಚಾರದಲ್ಲಿ ಕೀಳು ರಾಜಕೀಯ ಬೇಡ: ಸಭಾಪತಿಯಂತಹ ಗೌರವದ ಹುದ್ದೆಯ ಬಗ್ಗೆ ವಿರೋಧ ಪಕ್ಷಗಳು ಕೀಳು ರಾಜಕೀಯ ಮಾಡಬಾರದು. ಕಳೆದ ಮೂರು ವರ್ಷಗಳಿಂದ ಒಂದು ವೋಟಿಗಾಗಿ ವಿಧಾನ ಪರಿಷತ್ನ ಸಭಾಪತಿ ಬದಲಾವಣೆ ಮಾಡಿರಲಿಲ್ಲ. ಸ್ವತಃ ಬಸವರಾಜ ಹೊರಟ್ಟಿ ಅವರೇ ಮುಖ್ಯಮಂತ್ರಿಗಳ ಬಳಿ ತೆರಳಿ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ. ನಂತರ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಈ ವಿಚಾರದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಭಾಪತಿ ಎನ್ನುವುದು ಸಾಂವಿಧಾನಿಕ ಹುದ್ದೆ. ಅದನ್ನು ಮುಂದಿಟ್ಟುಕೊAಡು ರಾಜಕಾರಣ ಮಾಡಬಾರದು. ಅದು ರಾಜ್ಯಕ್ಕೆ ಕಪುö್ಪ ಚುಕ್ಕೆ. ಈಗ ಸಭಾಪತಿ ಎನ್ನುವ ಗೌರವಾನ್ವಿತ ಹುದ್ದೆಯ ಬಗ್ಗೆ ಬಿಜೆಪಿಯವರು ಮಾತನಾಡುತ್ತಿರುವುದು ಸರಿಯಲ್ಲ. ಅವರು ಮಾತನಾಡಲು ಬೇರೆ ವಿಷಯಗಳಿವೆ. ಆ ವಿಷಯಗಳ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.
ಖಾತೆ ಹಂಚಿಕೆಯಲ್ಲಿ ಗೊಂದಲ ಇಲ್ಲ: ಸಚಿವರಿಗೆ ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ವರಿಷ್ಠರ ಜೊತೆ ಚರ್ಚೆ ಮಾಡಿ ಎಲ್ಲರಿಗೂ ಸಮರ್ಪಕವಾಗಿ ಶೀಘ್ರವೇ ಖಾತೆ ಹಂಚಿಕೆ ಮಾಡುತ್ತಾರೆ. ಎಲ್ಲಾ ಖಾತೆಗಳು ಪವರ್ಫುಲ್ ಖಾತೆಗಳು ಎಂದು ಹೇಳಿದರು.