
ಮೈಸೂರು: ‘ನಾಲ್ಕು ಕ್ಷೇತ್ರಗಳಿಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಎನ್ಡಿಎ ಅಭ್ಯರ್ಥಿಗಳು ಅಭೂತಪೂರ್ವ ಗೆಲುವನ್ನು ಸಾಧಿಸಿದ್ದು, ಈ ಚುನಾವಣೆಯು ಆಡಳಿತ ರೂಢ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ ಎಚ್ಚರಿಕೆಯಾಗಿದೆ. ಯಾವುದೇ ಕ್ಷಣದಲ್ಲಿ ವಿಧಾನಸಭೆಗೆ ಚುನಾವಣೆ ನಡೆದರೂ 130ಕ್ಕೂ ಹೆಚ್ಚು ಸ್ಥಾನಗಳಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬುಧವಾರ ಮೈಸೂರಿನ ಹೋಟೆಲ್ ಪ್ರೆಸಿಡೆಂಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಶಿಕ್ಷಕರು ಹಾಗೂ ಎರಡು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ನಮಗೆ ಆಶೀರ್ವಾದ ಮಾಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎರಡೂ ಪಕ್ಷದವರ ಕೆಲಸದ ಪರಿಣಾಮ ಗೆಲುವು ಸಾಧ್ಯವಾಗಿದೆ’ ಈ ಫಲಿತಾಂಶ ಅನೇಕ ಸಂದೇಶಗಳನ್ನು ನೀಡಿದೆ. ‘ಗ್ಯಾರಂಟಿಗಳ ಭ್ರಮೆಯಲ್ಲಿ. ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕಪಾಠ ಕಲಿಸಿದೆ.ಗಂಟೆ, ಮೂಟೆ ಕಟ್ಟಿಕೊಂಡು ಅಧಿಕಾರ ಬಿಟ್ಟು ಹೋಗುವಂತೆ ಕಾಂಗ್ರೆಸ್ನವರಿಗೆ ಮತದಾರರು ಸ್ಪಷ್ಟವಾದ ಸಂದೇಶವನ್ನು ನೀಡಿದ್ದಾರೆ. ಹೀಗಾಗಿ ನಮಗೆ ಇನ್ನೂ ಉತ್ಸಾಹ, ಭರವಸೆ ಹೆಚ್ಚಾಗಿ ಸಿಕ್ಕಿದೆ. ಜನರ ಒಲವು ಬಿಜೆಪಿ ಕಡೆ ಹೆಚ್ಚಾಗಿರುವುದನ್ನು ನೋಡಿದರೆ, ಯಾವುದೇ ಕ್ಷಣದಲ್ಲೂ ವಿಧಾನಸಭೆ ಚುನಾವಣೆ ನಡೆದರೂ ಸ್ಪಷ್ಟವಾದ ಬಹುಮತದೊಂದಿಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಮುಖ್ಯಮಂತ್ರಿಗಳೇ ಕಪಟ ನಾಟಕವನ್ನು ನಿಲ್ಲಿಸಿ ಎಂಬ ಸಂದೇಶವನ್ನು ಪ್ರಜ್ಞಾವಂತ ಮತದಾರರು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತು ಹಾಕುತ್ತೇವೆ ಎಂಬ ಸಂದೇಶ ಕೊಟ್ಟಿದ್ದಾರೆ. ಸರ್ಕಾರ ವಿಸರ್ಜನೆ ಮಾಡಿ ಎಂಬ ಸೂಚನೆಯನ್ನೂ ಕೊಟ್ಟಿದ್ದಾರೆ. ಸಣ್ಣ ಪುಟ್ಟ ಗೊಂದಲ ಬದಿಗಿಟ್ಟು ದೇಶ, ರಾಜ್ಯದ ಹಿತದೃಷ್ಟಿಯಿಂದ ಒಟ್ಟಾಗಿ ಹೋಗಬೇಕೆಂಬ ಸಂದೇಶವನ್ನು ನಮಗೂ ನೀಡಿದೆ’ ಎಂದರು.
ರಾಜ್ಯ ಸರ್ಕಾರದ ಹಣಕಾಸು ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಅದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ‘ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಕೇವಲ ? 2,500 ಪರಿಹಾರ ಘೋಷಣೆ ಮಾಡಿದ್ದಾರೆ. ಅದನ್ನೂ ಕೊಟ್ಟಿಲ್ಲ. ನೀವೇನು ಭಿಕ್ಷೆ ಕೊಡುತ್ತಿದ್ದೀರಾ? ವಿಶೇಷ ವಿಮಾನದಲ್ಲಿ ಬೆಳಗಾವಿಗೆ ಹೋಗಿದ್ದ ಮುಖ್ಯಮಂತ್ರಿ ಹಣಕಾಸಿನ ಪರಿಸ್ಥಿತಿ ಸರಿ ಇಲ್ಲ, ದುಡ್ಡಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಸಮಯ ಕೊಡಿ ಎಂದು ಕೇಳಲು ವಿಶೇಷ ವಿಮಾನದಲ್ಲಿ ಅಲ್ಲಿಗೆ ಹೋಗಬೇಕಾಗಿತ್ತಾ?’ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದಲ್ಲಿ 2 ಲಕ್ಷ ಹುದ್ದೆಗಳು ಖಾಲಿಯಿದ್ದರೂ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಲು ಸಾಧ್ಯವಾಗಿಲ್ಲ. ಮಹಿಳಾ, ರೈತ ಹಾಗೂ ಬಡವರ ವಿರೋಧಿಯಾಗಿದೆ. ಮೈಸೂರು, ಬಳ್ಳಾರಿ ಪಾದಯಾತ್ರೆಗಳ ಮೂಲಕ ಈ ಸರ್ಕಾರದ ಬಣ್ಣವನ್ನು ಬಯಲು ಮಾಡಿದ್ದೇವೆ. ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದಿದೆ ಎಂದರು.
ಅರಾಜಕತೆ ಸೃಷ್ಟಿ ಮಾಡಲು ಹೊರಟಿರುವ ರಾಹುಲ್ ಗಾಂಧಿ ಆಟ ನಡೆಯುವುದಿಲ್ಲ ಎಂಬ ಸಂದೇಶವನ್ನು ಮತದಾರರು ಕೊಟ್ಟಿದ್ದಾರೆ. ಎಸ್ಐಆರ್, ಚುನಾವಣಾ ಆಯೋಗ, ಇವಿಎಂ, ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಇವಿಎಂ ಬಳಸಿರಲಿಲ್ಲ ಎಂಬುದನ್ನು ಎಲ್ಲರೂ ಗಮನಿಸಬೇಕು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು, ಅವರು ಮಾಡುತ್ತಿರುವ ಕಾರ್ಯ ಮುಂದುವರಿಸಬೇಕು ಎಂಬ ಸಂದೇಶ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಜನರು ತಿರಸ್ಕರಿಸಿದ್ದಾರೆ. ಫಲಿತಾಂಶ ನಮಗೆ ಆನೆಬಲ ಹಾಗೂ ಶಕ್ತಿ ತುಂಬಿದೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಬರುವುದನ್ನು ಯಾವ ದುಷ್ಟಶಕ್ತಿಯೂ ತಡೆಯಲು ಆಗುವುದಿಲ್ಲ’ ಎಂದು ಹೇಳಿದರು.
ರಾಜ್ಯದಲ್ಲಿ 5.50 ಕೋಟಿ ಟನ್ ಕಬ್ಬು ಬೆಳೆಯಾಗುತ್ತಿದೆ. ಅದರ ಉತ್ಪನ್ನಗಳಿಂದಲೂ ರಾಜ್ಯಕ್ಕೆ ವಾರ್ಷಿಕವಾಗಿ 15 ಸಾವಿರ ಕೋಟಿರೂ ತೆರಿಗೆ ಆದಾಯವಾಗಿ ಬರುತ್ತಿದೆ. ಟನ್ ಕಬ್ಬಿಗೆ 500 ರೂ ಬೆಂಬಲ ಬೆಲೆಯನ್ನು ರಾಜ್ಯ ಸರ್ಕಾರ ನೀಡಬೇಕು. ಆದರೆ ಕೊಡದೆ ಎಲ್ಲ ಸಂದರ್ಭದಲ್ಲೂ ಕೇಂದ್ರಕ್ಕೆ ಪತ್ರ ಬರೆಯುತ್ತೀರಲ್ಲಾ ನಿಮಗೆ ಜವಾಬ್ದಾರಿ ಇಲ್ಲವೇ? ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿ, ಅಮೇಲೆ ಕೇಂದ್ರದ ಜೊತೆ ಮಾತನಾಡಿ, ಅಲ್ಲಿ ಸಮಸ್ಯೆ ಇದ್ದರೆ ಪರಿಹರಿಸಲು ಕ್ರಮ ಕೈಗೊಳ್ಳಿ. ಕಬ್ಬು ಬೆಳೆಗಾರರ ಹಿತರಕ್ಷಣೆಗೆ ತಕ್ಷಣ ಮುಂದಾಗಬೇಕು’ ಎಂದು ಒತ್ತಾಯಿಸಿದರು.
‘ಮಾಜಿ ಮುಖ್ಯಮಂತ್ರಿ ವಿರುದ್ಧ ಡಿಕೆಶಿ ಷಡ್ಯಂತ್ರ :
ಡಿಕೆಶಿ ಮುಖ್ಯಮಂತ್ರಿ ಆದ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾದವರನ್ನು ಮರೆತಿದ್ದಾರೆ. ಮಾಜಿ ಮುಖ್ಯಮಂತ್ರಿಯನ್ನೂ ಮರೆತಿದ್ದಾರೆ. ಅವರ ವಿರುದ್ಧವೇ ಷಡ್ಯಂತ್ರವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕರುಗಳಾದ ನಿರಂಜನ್ ಕುಮಾರ್, ಹರ್ಷವರ್ಧನ್, ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಈ.ಸಿ.ನಿಂಗರಾಜೇಗೌಡ, ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಸುಬ್ಬಣ್ಣ, ಮಾಜಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ರಾಜ್ಯ ಉಪಾಧ್ಯಕ್ಷ ಎಂ.ರಾಜೇAದ್ರ, ಮಾಜಿ ವಿಧಾನಪರಿಷತ್ ಸದಸ್ಯ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.