
ಮೈಸೂರು: ಕರ್ನಾಟಕದಿಂದ ತಮಿಳುನಾಡಿಗೆ ನಿತ್ಯವೂ 12 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ಮೇಲುಸ್ತುವಾರಿ ಸಮಿತಿ ಸೂಚನೆ ನೀಡಿರುವುದು ಕಾವೇರಿ ಕಣಿವೆಯ ಜನರಿಗೆ ಆಘಾತವನ್ನುಂಟು ಮಾಡಿದೆ. 12 ಸಾವಿರ ಕ್ಯೂಸೆಕ್ ನೀರು ಎಂದರೆ ಬರೋ ಬರೀ 1 ಟಿಎಂಸಿ. ನಿತ್ಯವೂ ತಮಿಳುನಾಡಿಗೆ ಇಷ್ಟು ಪ್ರಮಾಣದ ನೀರನ್ನು ಈಗ ಕಾವೇರಿ ಕಣಿವೆಯ ಜಲಾಶಯುಗಳಿಂದ ಹರಿಸಬೇಕಾಗಿದೆ. ಆದರೆ ಸಮಾಧಾನದ ವಿಷಯ ಎಂದರೆ, ಕಾವೇರಿ ಕಣಿವೆಯಲ್ಲಿರುವ ಜಲಾಶಯಗಳ ಹಿನ್ನೀರಿನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಬಗ್ಗೆ ಮಾಹಿತಿ ತರಿಸಿಕೊಂಡಿರುವ ಸಮಿತಿ ತಮಿಳುನಾಡಿಗೆ ಈಗ ನಿತ್ಯವೂ 1 ಟಿಎಂಸಿ ನೀರು ಹರಿಸುವಂತೆ ಸೂಚಿಸಿದೆ. ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯವೂ ಭರ್ತಿಯಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನದಿ ಮೂಲಕ ತಮಿಳುನಾಡಿಗೆ ಹರಿಸಲಾಗುತ್ತಿದೆ.
ಆಗಸ್ಟ್ ತಿಂಗಳ ಆರಂಭದಲ್ಲಿಯೇ ಕಬಿನಿ ಜಲಾಶಯ ಭರ್ತಿಯಾಗಿರುವ್ಯದರಿಂದ, ಜಲಾಶಯಕ್ಕೆ ಹರಿದು ಬರುತ್ತಿರುವ ನೀರನ್ನು ಹಾಗೆಯೇ ನದಿಗೆ ಬಿಡುವ ಮೂಲಕ ತಮಿಳುನಾಡಿಗೆ ಹರಿಸಲಾಗುತ್ತಿದೆ.
ಸುಮಾರು 15 ದಿನದವರೆಗೂ ಸತತ 3500 ಕ್ಯೂಸೆಕ್ ನಂತೆ 4.50 ಟಿಎಂಸಿ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಮಂಡಳಿ ನೀಡಿದ ಆದೇಶಕ್ಕಿಂತ ಹೆಚ್ಚಾಗಿ ನೀರನ್ನು ಕಬಿನಿ ಜಲಾಶಯದಿಂದ ನಿರಂತರವಾಗಿ ಹರಿಸಲಾಗುತ್ತಿದೆ.
ಆಗಸ್ಟ್ ತಿಂಗಳ ಎರಡನೇ ವಾರದೊಳಗೆ ಸುಮಾರು 16 ಟಿಎಂಸಿ ನೀರು ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಹರಿದು ಹೋಗಿದೆ. ಅದರಲ್ಲೂ ಆಗಸ್ಟ್ ತಿಂಗಳ 10 ದಿನದಲ್ಲೇ ಅಂದಾಜು 13 ಟಿಎಂಸಿ ನೀರು ಹರಿಬಿಡಲಾಗಿದೆ. ಇದು ನೀರು ನಿರ್ವಹಣಾ ಮಂಡಳಿ ನೀಡಿದ ಆದೇಶಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ
ಮೊದಲು ಕೆಲವೊಂದು ದಿನ 11 ಸಾವಿರ ಕ್ಯೂಸೆಕ್ ನೀರು ಹೊರ ಹೋಗಿದೆ. ನಂತರ ಕೇರಳದ ವೈನಾಡು ಹಾಗೂ ಪಶ್ಚಮಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದರಿಂದ ಕೆಲವು ದಿನ ಒಳಹರಿವು ಅಧಿಕವಾಗಿದ್ದಾಗ 27 ಸಾವಿರ ಕ್ಯೂಸೆಕ್ ನೀರು ನದಿ ಮೂಲಕ ತಮಿಳುನಾಡಿಗೆ ಹರಿಸಲಾಗಿದೆ.
ಸದ್ಯ ಕಬಿನಿ ಜಲಾಶಯಕ್ಕೆ 9660 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 11,583 ಕ್ಯೂಸೆಕ್ ನೀರನ್ನು ನದಿ ಮೂಲಕ ತಮಿಳುನಾಡಿಗೆ ಹರಿಸಲಾಗುತ್ತಿದೆ. ಅಂದರೆ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣಕ್ಕಿಂತ ಹೆಚ್ಚಾಗಿ 2 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿ ನೀಡಿರುವ ಆದೇಶವನ್ನು ಪಾಲಿಸಬೇಕಾದರೆ ಇನ್ನೂ 1 ಸಾವಿರ ಕ್ಯೂಸೆಕ್ ನೀರನ್ನು ಹರಿಸಬೇಕಾಗುತ್ತದೆ. ಆದರೆ ಪರಿಸ್ಥಿತಿ ಒಂದೇ ರೀತಿ ಇರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾದರೆ, ಆಗ ಮಂಡಳಿ ನೀಡಿರುವ ಆದೇಶ ಪಾಲನೆ ಕಷ್ಟವಾಗುತ್ತದೆ. ಪಾಲಿಸಲು ಹೊರಟರೆ ಕಬಿನಿ ಜಲಾಶಯ ಖಾಲಿಯಾಗುವ ಆತಂಕವಿದೆ.
ಈ ತಿಂಗಳ ಅಂತ್ಯದವರೆಗೆ ಕಬಿನಿ ನದಿ ಪಾತ್ರದ ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆಯಿದೆ. ಅದರಲ್ಲೂ ಕೇರಳದ ವಯನಾಡು ಭಾಗದಲ್ಲಿ ಮಳೆಯಾಗಬಹುದು ಎಂದು ತಿಳಿಸಲಾಗಿದೆ. ಓಣಂವರೆಗೂ ಮಳೆಯಾಗುವುದರ ಸೂಚನೆ ಇರುವುದರಿಂದ ಕಬಿನಿ ಜಲಾಶಯಕ್ಕೆ ಇನ್ನೂ ಕೆಲವು ದಿನ ಒಳಹರಿವು ಇರಲಿದೆ. ಜಲಾಶಯ ಭರ್ತಿಯಾಗಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ನೀರನ್ನು ಹೊರ ಹರಿಸಬೇಕಾಗುತ್ತದೆ ಎಂದು ಜಲಾಶಯದ ಅಧಿಕಾರಿಗಲು ಹೇಳುತ್ತಿದ್ದಾರೆ.
ಕಬಿನಿ ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ನಿತ್ಯ 2 ಸಾವಿರ ಕ್ಯೂಸೆಕ್ ನೀರನ್ನು ಕೆರೆಗಳನ್ನು ತುಂಬಿಸಲು ಹಾಗೂ ಕುಡಿಯುವ ನೀರಿಗಾಗಿ ಬಳಸಬೇಕಾಗುತ್ತದೆ. ಉಳಿಕೆ ನೀರು ನದಿ ಮೂಲಕ ತಮಿಳುನಾಡಿಗೆ ಹರಿಸಬೇಕಾಗುತ್ತದೆ.
ಮೊದಲಿನಿಂದಲೂ ತಮಿಳುನಾಡು ವಿವಾದ ಏರ್ಪಟ್ಟಾಗ ಕಬಿನಿ ಜಲಾಶಯದಿಂದಲೇ ಹೆಚ್ಚಿನ ನೀರು ಹರಿಸಿಕೊಂಡು ಬರಲಾಗುತ್ತಿದೆ. ಕೆಲವು ವರ್ಷಗಳಲ್ಲಿ ಉತ್ತಮ ಮಳೆಯಾದಾಗ ಹೆಚ್ಚಿನ ನೀರು ಜಲಾಶಯದಿಂದ ಹರಿದು ಹೋಗಿರುವ ಉದಾಹರಣೆಯೂ ಇದೆ. ಈ ವರ್ಷ ಜುಲೈ 15ರವರೆಗೂ ಜಲಾಶಯಕ್ಕೆ ಕಡಿಮೆ ಒಳಹರಿವು ಇತ್ತು. ಆನಂತರ ಕೇರಳದಲ್ಲಿ ಮಳೆ ಹೆಚ್ಚಾಗಿ ಒಳಹರಿವು ಹೆಚ್ಚಿತ್ತು. ಈಗಲೂ ನೀರಿನ ಒಳಹರಿವು ಜಲಾಶಯಕ್ಕೆ ಉತ್ತಮವಾಗಿದೆ. ಜಲಾಶಯ ತುಂಬಿರುವ ಕಾರಣದಿಂದ ಹೆಚ್ಚುವರಿ ನೀರು ನದಿ ಮೂಲಕ ಹರಿದು ಹೋಗುತ್ತಿದೆ. ಸದ್ಯ ಜಲಾಶಯದ ನೀರಿನ ಮಟ್ಟ 2282.76 ಅಡಿಗಳಾಗಿದ್ದು, ಗರಿಷ್ಠ ಮಟ್ಟ 2284 ಅಡಿಗಳಾಗಿದೆ. ನೀರು ಸಂಗ್ರಹ ಸಾಮಾರ್ಥ್ಯ 19.52 ಟಿಎಂಸಿಯಾಗಿದ್ದು, ಈಗ 18.81 ಟಿಎಂಸಿ ನೀರಿದೆ.