
ಪಿರಿಯಾಪಟ್ಟಣ : ರೈತ ಸಂಘಟನೆಗೆ ತನ್ನದೇ ಆದ ಸಾಮಾಜಿಕ ಜವಾಬ್ದಾರಿ ಇದೆ ಎಂದು ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಸ್ವಾಮಿ ಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆಡಳಿತ ಸರ್ಕಾರಗಳು ಇಂದು ರೈತರ ಹಿತದೃಷ್ಟಿಯನ್ನು ಕಾಪಾಡುವಲ್ಲಿ ವಿಫಲವಾಗುತ್ತಿದೆ. ಈ ಬಗ್ಗೆ ರೈತ ಸಂಘವು ಜಾಗೃತಿ ಹೊಂದಬೇಕು. ದೇಶದ ಬೆನ್ನೆಲುಬಾಗಿರುವ ರೈತರು ಇಂದು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಸಂಕಷ್ಟ ಅನುಭವಿಸಬೇಕಾಗಿದೆ ಅಲ್ಲದೆ ರಾಜ್ಯದಾದ್ಯಂತ ಮಳೆಯ ಅಭಾವದಿಂದಾಗಿ ಬರಪೀಡಿತ ಪ್ರದೇಶಗಳು ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಇದನ್ನು ಪರಿಗಣಿಸಿ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳನ್ನು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಕ್ರಮ ವಹಿಸಬೇಕು. ಸಂಘಟನೆಗೆ ನೂತನವಾಗಿ ಸೇರ್ಪಡೆಗೊಂಡಿರುವ ರೈತರು ಸಂಘದ ನಿಯಮಗಳಿಗೆ ಬದ್ಧವಾಗಿ ಕೆಲಸ ನಿರ್ವಹಿಸಬೇಕು ರೈತರಿಗೆ ಕಾರ್ಮಿಕರಿಗೆ ಹಾಗೂ ಮಹಿಳೆಯರಿಗೆ ಅನ್ಯಾಯವಾದಾಗ ಅದನ್ನು ಖಂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಾವೇರಮ್ಮ ಮಾತನಾಡಿ ಕರ್ನಾಟಕ ರಾಜ್ಯ ಹಸಿರು ಸೇನೆಯ ಸಾಮಾಜಿಕ ಬದ್ಧತೆ ಮತ್ತು ಕೆಲಸಗಳನ್ನು ನೋಡಿ ಇಂದು ಸಾಕಷ್ಟು ಮಹಿಳೆಯರು ಸಂಘಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಸಂಘವು ಎಂದಿಗೂ ಮಹಿಳೆಯರ ರಕ್ಷಣೆಗೆ ಸಿದ್ಧವಿದ್ದು ಸಂಘಟನಾತ್ಮಕ ಶಕ್ತಿಯಾಗಿ ಬೆಳೆದಾಗ ಮಾತ್ರ ಸಮಾಜದಲ್ಲಿ ಪ್ರತಿಯೊಬ್ಬರಿಗೂ ರಕ್ಷಣೆ ದೊರೆಯುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಸಿರು ಸೇನೆಯ ತಾಲೂಕು ಯುವ ಘಟಕದ ಅಧ್ಯಕ್ಷ ಮಹದೇವ್, ಉಪಾಧ್ಯಕ್ಷ ನಾಗೇಂದ್ರ, ಮುಖಂಡರಾದ ಪ್ರಭು, ದೇವ ಶೆಟ್ಟಿ ಸಿಗೂರು, ಮುರುಗೇಶ್, ಪ್ರಕಾಶ್, ಶಿವರಾಜ್ ಕೊಣಸೂರು, ವಿಶ್ವನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.