
- 13 ದಿನಗಳಲ್ಲಿ ಚಾಮುಂಡಿಬೆಟ್ಟಕ್ಕೆ 8.61 ಲಕ್ಷ ಭಕ್ತರು ಭೇಟಿ
*2,000 ರೂ. ಟಿಕೆಟ್ ಮಾರಾಟದಿಂದ ಬರೋ ಬರೀ 3.08 ಕೋಟಿ ರೂ ಆದಾಯ
ಮೈಸೂರು: ಆಷಾಢ ಮಾಸದ ಶುಕ್ರವಾರಗಳು, ವಾರಾಂತ್ಯಗಳು ಹಾಗೂ ಚಾಮುಂಡೇಶ್ವರಿಯ ವರ್ಧಂತಿ ಸೇರಿ 13 ದಿನಗಳಲ್ಲಿ ಚಾಮುಂಡಿಬೆಟ್ಟಕ್ಕೆ 8.61 ಲಕ್ಷ ಭಕ್ತರು ಭೇಟಿ ನೀಡಿದ್ದು, ನಾಡ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಯ ವಿಶೇಷ ದರ್ಶನಕ್ಕಾಗಿ 2,000 ರೂ. ಟಿಕೆಟ್ ಮಾರಾಟದಿಂದ ಬರೋ ಬರೀ 3.08 ಕೋಟಿ ರೂ ಬಂದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಷಾಢ ಮಾಸದ ಶುಕ್ರವಾರ ಹಾಗೂ ವರ್ಧಂತಿ ಮಹೋತ್ಸವದಂದು ಬೆಟ್ಟಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆಯಲ್ಲಿ ಗಣನೀಯವಾದ ಹೆಚ್ಚಳವಾಗಿದೆ. ಆಷಾಢ ಶುಕ್ರವಾರದೊಂದಿಗೆ ವಾರಾಂತ್ಯ ದಿನವಾದ ಶನಿವಾರ, ಭಾನುವಾರದಂದು ಬೆಟ್ಟಕ್ಕೆ ನೀಡಿರುವ ಭಕ್ತರ ಸಂಖ್ಯೆಯಲ್ಲಿ ಅಪಾರ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ಮೊದಲ ಆಷಾಢ ಶುಕ್ರವಾರ(ಜು.17)ರಂದು 55,000, ಎರಡನೇ ಆಷಾಢ ಶುಕ್ರವಾರ(ಜು.24) 75,000, ಮೂರನೇ ಆಷಾಢ ಶುಕ್ರವಾರ(ಜು.31) 98,500 ಹಾಗೂ ಕೊನೆಯ ಆಷಾಢ ಶುಕ್ರವಾರ(ಆ.7) 1.25 ಲಕ್ಷ ಹಾಗೂ ಆ. 4ರಂದು ನಡೆದ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದಂದು ಒಟ್ಟು 89,000 ಭಕ್ತರು ದೇವಾಲಯಕ್ಕೆ ಭೇಟಿ ನೀಡಿ, ಬೆಟ್ಟದ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ಶನಿವಾರ ಮತ್ತು ಭಾನುವಾರದಿಂದು ಸರಾಸರಿ 36,000ರಿಂದ 78,000 ಭಕ್ತರು ಭೇಟಿ ನೀಡಿದ್ದಾರೆ ಎಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ಆಷಾಢ ಮಾಸದ ಶುಕ್ರವಾರ ಸೇರಿದಂತೆ ಒಟ್ಟು 13 ದಿನಗಳಲ್ಲಿ ಬೆಟ್ಟದ ದೇವಾಲಯಕ್ಕೆ ಭೇಟಿ ನೀಡಿದ 8.61 ಲಕ್ಷ ಭಕ್ತರಲ್ಲಿ ಆಷಾಢದ ನಾಲ್ಕು ಶುಕ್ರವಾರಗಳಲ್ಲಿ 3,53,500 ಮಂದಿ ಭೇಟಿ ನೀಡಿದ್ದಾರೆ. ನಾಲ್ಕು ಶನಿವಾರಗಳಲ್ಲಿ 1,98,000, ನಾಲ್ಕು ಭಾನುವಾರದಂದು 2,20,500 ಹಾಗೂ ಆ.4 ವರ್ಧಂತಿ ದಿನ 89,000 ಭಕ್ತರು ದೇವಾಲಯಕ್ಕೆ ಬಂದಿದ್ದಾರೆ.
ಅಲ್ಲದೆ, ಆ.7ರಿಂದ ಆ. 9ರವರೆಗಿನ 2.78 ಲಕ್ಷ ಭಕ್ತರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿರುವುದು ವಿಶೇಷ. 8,45,579 ಭಕ್ತರು ಧರ್ಮದರ್ಶನದ ಸಾಲಿನ ಮೂಲಕ ದೇವಿಯ ದರ್ಶನ ಪಡೆದಿದ್ದಾರೆ.
ಎರಡು ಸಾವಿರ ರೂ. ಟಿಕೆಟ್ ಮಾರಾಟದಿಂದ ಬಂಪ್ ಆದಾಯ : ಆಷಾಢ ಶುಕ್ರವಾರದಂತೆ 2 ಸಾವಿರ ರೂ. ಟಿಕೆಟ್ ಪಡೆದು ವಿಶೇಷ ದರ್ಶನ ಪಡೆದ ಭಕ್ತರ ಸಂಖ್ಯೆ 15,421 ಮಂದಿ ಇದ್ದು, ಟಿಕೆಟ್ ಮಾರಾಟದಿಂದ 3,08,42,000 ಆದಾಯ ಸಂಗ್ರಹವಾಗಿದೆ. ಕೇವಲ 1.79ರಷ್ಟು ಭಕ್ತರು ಧರ್ಮ ದರ್ಶನ ಪಡೆದಿದ್ದಾರೆ. ಶಕ್ತಿ ದೇವತೆಯ ಆರಾಧನೆಯ ಆಷಾಢ ಮಾಸದ 4 ಶುಕ್ರವಾರ, ವರ್ಧಂತಿ ದಿನ ಹಾಗೂ ವಾರಾಂತ್ಯದದಿನ ಸೇರಿ 13 ದಿನಗಳಲ್ಲಿ 8.61 ಲಕ್ಷ ಭಕ್ತರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದು, 2 ಸಾವಿರ ರೂ. ಟಿಕೆಟ್ನಿಂದ 3,08,42,000 ರೂ. ಆದಾಯ ಸಂಗ್ರಹವಾಗಿದೆ ಎಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಎಂ.ಜೆ.ರೂಪ ತಿಳಿಸಿದ್ದಾರೆ.
4,935 ಟ್ರಿಪ್ ಬಸ್ ಸಂಚಾರ: ಆಷಾಢ ಮಾಸದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಭಕ್ತರ ಅನುಕೂಲಕ್ಕಾಗಿ ಒಟ್ಟು 4,935 ಟ್ರಿಪ್ ಬಸ್ ಸಂಚಾರದ ವ್ಯವಸ್ಥೆ ಮಾಡಿತ್ತು. 2,522 ಟ್ರಿಪ್ ಸಾರಿಗೆ ಬಸ್, 602 ಟ್ರಿಪ್ ವೋಲ್ವೋ ಬಸ್ ಹಾಗೂ 1,811 ಟ್ರಿಪ್ ನಗರ ಸಾರಿಗೆ ಬಸ್ ಸಂಚರಿಸಿವೆ ಎಂದು ಮೈಸೂರು ನಗರ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್ ತಿಳಿಸಿದ್ದಾರೆ. ಅತ್ಯಂತ ಹೆಚ್ಚು, ಜು.17 ರಂದು 470, ಆ.7 ರಂದು 466 ಟ್ರಿಪ್?ಗಳು ಸಂಚರಿಸಿವೆ. ಈ ಸಾಲಿನ ಆಷಾಢ ಮಾಸದಲ್ಲಿ ಸಂಸ್ಥೆಗೆ 82,01,834 ರೂ. ಆದಾಯ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.