
ಮೈಸೂರು; ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಸಾರ್ವಕಾಲಿಕ ಏರಿಕೆ ಕಾಣುತ್ತಿದ್ದು, ಸಕ್ಕರೆ ಕಾರ್ಖಾನೆಗಳು ಎಥನಾಲ್ ಉತ್ಪಾದನೆಯಿಂದ ಭಾರಿ ಲಾಭ ಗಳಿಸುತ್ತಿವೆ. ಆದರೆ ಕಬ್ಬು ಬೆಳೆಯುವ ರೈತನಿಗೆ ಮಾತ್ರ ನ್ಯಾಯಯುತ ಬೆಲೆ ಸಿಗದೆ `ಕಹಿ’ ಅನುಭವಿಸುವಚಿತಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಕ್ಕರೆ ಕಾರ್ಖಾನೆಗಳ ಶಕ್ತಿಶಾಲಿ ಲಾಬಿಗೆ ಸರ್ಕಾರಗಳು ಮಣಿಯುತ್ತಿದ್ದು, ಬೆವರು ಹರಿಸಿ ಬೆಳೆ ತೆಗೆಯುವ ರೈತರ ಹಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಪರಿಸ್ಥಿತಿಯಿಂದಾಗಿ ಉತ್ತರ ಪ್ರದೇಶ, ಮಹಾರಾಷ್ಟç ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಕಬ್ಬಿನ ಇಳುವರಿ ಗಣನೀಯವಾಗಿ ಕುಸಿದಿದೆ. ಬೆಳೆ ನಷ್ಟ ಮತ್ತು ಉತ್ಪಾದನಾ ವೆಚ್ಚ ಹೆಚ್ಚಿ, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಬಿಕ್ಕಟ್ಟನ್ನು ನಿವಾರಿಸಲು ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರೈತರಿಗೆ ಆಲೆಮನೆಗಳಲ್ಲಿ ಎಥನಾಲ್ ಉತ್ಪಾದನೆಗೆ ಅವಕಾಶ ನೀಡಬೇಕು:
ದೊಡ್ಡ ಸಕ್ಕರೆ ಕಾರ್ಖಾನೆಗಳಿಗೆ ಮಾತ್ರ ಎಥನಾಲ್ ಉತ್ಪಾದನೆ ಲಾಭ ಸೀಮಿತವಾಗಬಾರದು. ರೈತರು ತಮ್ಮ ಸ್ಥಳೀಯ ಆಲೆಮನೆಗಳಲ್ಲಿಯೇ ಎಥನಾಲ್ ಉತ್ಪಾದನೆ ಮಾಡಿಕೊಳ್ಳಲು ಸರ್ಕಾರ ಸರಳ ನಿಯಮ ಹಾಗೂ ನೀತಿಯನ್ನು ರೂಪಿಸಬೇಕು. ಹೀಗೆ ಉತ್ಪಾದಿಸಿದ ಎಥನಾಲ್ ಅನ್ನು ಅಡುಗೆ ಮನೆಗಳಲ್ಲಿ ಇಂಧನವಾಗಿ ಬಳಸಲು, ರೈತರ ಸ್ವಂತ ವಾಹನಗಳು ಹಾಗೂ ಟ್ರಾ÷್ಯಕ್ಟರ್‌ಗಳಿಗೆ ಇಂಧನವಾಗಿ ಬಳಸಿಕೊಳ್ಳಲು ಹಾಗೂ ಹೆಚ್ಚುವರಿ ಎಥನಾಲ್ ಅನ್ನು ಸರ್ಕಾರವೇ ನಿಗದಿತ ಬೆಲೆಗೆ ಖರೀದಿ ಮಾಡಲು ಅವಕಾಶ ನೀಡಬೇಕು. ಇದರಿಂದ ರೈತರ ಇಂಧನ ವೆಚ್ಚ ಗಣನೀಯವಾಗಿ ಕಡಿಮೆಯಾಗಿ, ಅವರ ಆರ್ಥಿಕ ಸಬಲೀಕರಣಕ್ಕೆ ದಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಬ್ರೆಜಿಲ್ ಮಾದರಿಯ ವೈಜ್ಞಾನಿಕ ತಂತ್ರಜ್ಞಾನದ ಅಗತ್ಯತೆ: ದೇಶದಲ್ಲಿ ಕಬ್ಬಿನ ಇಳುವರಿ ಹೆಚ್ಚಿರುವ ಸಮಯದಲ್ಲಿ, ಹೆಚ್ಚುವರಿ ಕಬ್ಬನ್ನು ಸಕ್ಕರೆಯಾಗಿ ಪರಿವರ್ತಿಸದೆ, ಎಥನಾಲ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಇಂಧನ ವಲಯಕ್ಕೆ ಬೆಂಬಲ ಸಿಗುತ್ತದೆ ಮತ್ತು ಸಕ್ಕರೆ ಬೆಲೆ ಕುಸಿಯುವುದು ತಪುö್ಪತ್ತದೆ.
ಬರಗಾಲ ಅಥವಾ ಮಳೆ ಅಭಾವದಿಂದ ಕಬ್ಬಿನ ಇಳುವರಿ ಕಡಿಮೆಯಾದಾಗ, ಎಥನಾಲ್ ಉತ್ಪಾದನೆಯನ್ನು ತಕ್ಷಣವೇ ನಿಯಂತ್ರಿಸಿ, ದೇಶೀಯ ಬಳಕೆಗೆ ಅಗತ್ಯವಿರುವ ಸಕ್ಕರೆ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು.
ಇಂತಹ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಮುಂಚಿತವಾಗಿಯೇ ಯೋಜಿಸಿ ಜಾರಿಗೆ ತಂದರೆ, ದೇಶದಲ್ಲಿ ಸಕ್ಕರೆ ಅಭಾವ ಸೃಷ್ಟಿಯಾಗುವುದಿಲ್ಲ ಹಾಗೂ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿಯೂ ತಟ್ಟುವುದಿಲ್ಲ ಎಂದು ಸಲಹೆ ನೀಡಿದ್ದಾರೆ.
ಬರಗಾಲದ ಹೊಡೆತಕ್ಕೆ ಸಿಲುಕಿರುವ ಕಬ್ಬು ಬೆಳೆಗಾರರಿಗೆ ಎಫ್.ಆರ್.ಪಿ ದರವನ್ನು ವೈಜ್ಞಾನಿಕವಾಗಿ ಹೆಚ್ಚಿಸಿ, ಉಪ ಉತ್ಪನ್ನಗಳ ಕಾರ್ಖಾನೆಗಳ ಲಾಭದಲ್ಲಿ ಸೂಕ್ತ ಪಾಲು ರೈತರಿಗೆ ಸಿಗುವಂತೆ ಮಾಡುವುದರ ಜೊತೆಗೆ, ರೈತರಿಗೆ ಆಲೆಮನೆಗಳಲ್ಲಿ ಸ್ವತಂತ್ರ ಎಥನಾಲ್ ಉತ್ಪಾದನೆಗೆ ಬಳಕೆ ಹಕ್ಕು ನೀಡುವುದು ಸರ್ಕಾರದ ತಕ್ಷಣದ ಆದ್ಯತೆಯಾಗಬೇಕು ಎಂದು ಆಗ್ರಹಿಸಿದ್ದಾರೆ.