Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಅವ್ಯವಹಾರ ನಡೆದಿದೆ ಎಂದು ಶಾಸಕರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ; ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು;

ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ 2024-25ನೇ ಸಾಲಿನಲ್ಲಿ ಅವ್ಯವಹಾರವಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಅವರು ಆರೋಪಿಸಿರುವುದರಲ್ಲಿ ವಾಸ್ತವವಾಗಿ ಯಾವುದೇ ಹುರುಳಿಲ್ಲ ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ಹೇಳಿದರು.

    ಅವರು ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಇತ್ತೀಚೆಗೆ ದೇವಾಲಯದಲ್ಲಿ ಸಭೆ ನಡೆಸಿ ದೇವಸ್ಥಾನದಲ್ಲಿ 2024-25ನೇ ಸಾಲಿನಲ್ಲಿ 4ಕೋಟಿ ಅಂದಾಜು ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು. ಆದರೆ ಈ ಸಂಬಂಧ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡದೆ ಅನವಶ್ಯಕ ಆರೋಪಗಳನ್ನು ಮಾಡುವುದು ಸರಿಯಲ್ಲ ಇದರಿಂದ ರಾಜ್ಯದ 5ನೇ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆ ಹೊಂದಿರುವ ದೇವಾಲಯದ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದು ಜೊತೆಗೆ ದೇಗುಲದ ಆದಾಯವೂ ಭವಿಷ್ಯದಲ್ಲಿ ಕಡಿತಗೊಳ್ಳುವ ಆತಂಕವಿದೆ. ಸೂಕ್ತ ದಾಖಲೆಗಳೊಂದಿಗೆ ಶಾಸಕರು ತಪ್ಪಿತಸ್ಥರು ಯಾರು ಎಂಬುದನ್ನು ಜನತೆಯ ಮುಂದಿಡಬೇಕು ಬದಲಾಗಿ ದಾಖಲೆ ರಹಿತ ಆರೋಪ ಸರಿಯಲ್ಲ, ಇನ್ನು ಶಾಸಕ ದರ್ಶನ್ ಧ್ರುವನಾರಾಯಣ ಅವರು ಬಿಳಿಗಿರಿ ರಂಗನಬೆಟ್ಟದ ದೇವಾಲಯದ ಬಗ್ಗೆ ತೋರುವ ಕಾಳಜಿಯನ್ನು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಬಗ್ಗೆ ತೋರುತ್ತಿಲ್ಲ ಇದರಿಂದಾಗಿ ನಾನು ಈ ಹಿಂದೆ ಶಾಸಕನಾಗಿದ್ದ ವೇಳೆ ಜಾರಿಗೊಳಿಸಲು ಮುಂದಾಗಿದ್ದ ಬೆಳ್ಳಿ ರಥ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಸದ್ಯ ಮಾರುಕಟ್ಟೆಯಲ್ಲಿ ಬೆಳ್ಳಿ ದರ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆಯಾಗಿದ್ದು ಜೊತೆಗೆ ದೇವಾಲಯಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ ಇನ್ನು ಭಕ್ತರ ಅನುಕೂಲಕ್ಕಾಗಿ 75 ಕೊಠಡಿಗಳ ವಸತಿಗೃಹ ನಿರ್ಮಾಣಕ್ಕೆ ಅಗತ್ಯ ಅನುಮೋದನೆ ಪಡೆದುಕೊಳ್ಳಲಾಗಿತ್ತು ಆದರೆ ಶಾಸಕರು ಯೋಜನೆಯನ್ನು ಜಾರಿಗೊಳಿಸದೆ ತಡೆಹಿಡಿಯುವ ಮೂಲಕ ದೇವಾಲಯದ ಪ್ರಗತಿಗೆ ಅಡ್ಡಿಯಾಗಿದ್ದಾರೆ. ಎಂದರಲ್ಲದೆ ಶ್ರೀಕಂಠೇಶ್ವರ ದೇವಾಲಯದಲ್ಲಿ ಪುರಾತತ್ವ ಇಲಾಖೆಯ ಜಿಲ್ಲಾಧಿಕಾರಿ ಅನುಮತಿ ಇಲ್ಲದೆ, ಶೌಚಾಲಯ ಕಟ್ಟಡವನ್ನು, ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಾಗಿ ಪರಿವರ್ತನೆ ಮಾಡಲಾಗಿದೆ, ಕೇವಲ ನಿರ್ಮಿತಿ ಕೇಂದ್ರದ ಮೂಲಕ ಎಲ್ಲಾ ಕಾಮಗಾರಿಗಳನ್ನು ನೀಡಿ ಅವರ ಮೇಲೆ ಒತ್ತಡ ಏರಿ ಕೆಲಸ ಮಾಡಿಸಲಾಗುತ್ತಿದೆ,2026 ನೇ ಸಾಲಿನಲ್ಲಿ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಲ್ಲಿ ಎಸಿ ಅಳವಡಿಸಿರುವುದಾಗಿ 4.5 ಲಕ್ಷ ಬಿಲ್ ಮಾಡಲಾಗಿದೆ, ವಾಸ್ತವವಾಗಿ ಎಸಿ ಯಂತ್ರವನ್ನೇ ಅಳವಡಿಸಿಲ್ಲ, 2026 ನೇ ಸಾಲಿನಲ್ಲಿ ನಡೆದ ಅವ್ಯವಹಾರವನ್ನು ಮುಚ್ಚಿ ಹಾಕಲು ಶಾಸಕರು ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

  ಅಲ್ಲದೆ ಶಾಸಕ ದರ್ಶನ್ ಧ್ರುವನಾರಾಯಣ್ ಈ ಹಿಂದೆ 2024ರಲ್ಲಿ ನಂಜನಗೂಡು ನಗರಸಭೆಯಲ್ಲಿ ನಗರೋತ್ಥಾನ ಯೋಜನೆ ಅನುಷ್ಟಾನದಲ್ಲಿ ಅವ್ಯವಹಾರ ಆಗಿದ್ದು ಲೋಕಾಯುಕ್ತ ತನಿಖೆಗೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದ್ದರು ಆದರೆ ಎರಡು ವರ್ಷಗಳಾದರೂ ಯಾವುದೇ ತನಿಖೆಗೆ ಮುಂದಾಗಿಲ್ಲ ಈ ಬಗ್ಗೆ ಶಾಸಕರೇ ಜನರಿಗೆ ಉತ್ತರ ನೀಡಬೇಕು. ಇನ್ನು ನಂಜನಗೂಡು ನಗರದ ಪ್ರವಾಸೀ ಮಂದಿರವನ್ನು ಕಾಂಗ್ರೆಸ್ ಕಚೇರಿಯನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನಂಜನಗೂಡುಗೆ ಆಗಮಿಸಿದ್ದ ವೇಳೆ ಪ್ರವಾಸಿ ಮಂದಿರಕ್ಕೆ ಬೀಗ ಜಡಿಯಲಾಗಿತ್ತು, ಕಳೆದ ತಿಂಗಳು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರ ಪತ್ನಿ ನಂಜನಗೂಡಿಗೆ ಭೇಟಿ ನೀಡಿದ್ದ ವೇಳೆ ಪ್ರವಾಸೀ ಮಂದಿರದಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿದ್ದರಿಂದ ಅವರಿಗೆ ಪ್ರವಾಸೀ ಮಂದಿರ ಲಭ್ಯವಾಗಲಿಲ್ಲ ಹೀಗೆ ಗಣ್ಯರ ಬಳಕೆಗೂ ಅವಕಾಶ ಕೊಡದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಸರ್ಕಾರಿ ಪ್ರವಾಸೀ ಮಂದಿರವನ್ನು ಬಳಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಪ್ರವಾಸೀ ಮಂದಿರಕ್ಕೆ ಪ್ರತೀ ವರ್ಷ ಪೀಠೋಪಕರಣಗಳನ್ನು ಖರೀದಿಸುವ ಮೂಲಕ ಪ್ರವಾಸೀ ಮಂದಿರ ಸದಸ್ಯ ಶೋರೂಮ್ ಆಗಿ ಪರಿವರ್ತನೆಯಾಗಿದೆ ಎಂದು ದೂರಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಾಲೂಕಿನ ಕವಲಂದೆ ವ್ಯಾಪ್ತಿಯ ಹಳ್ಳಿಗಳ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ರೈತರನ್ನು ಪೂರ್ಣ ಪ್ರಮಾಣದಲ್ಲಿ ಬೆಳೆ ಒಣಗಿರುವುದು ಕಂಡುಬಂದಿಲ್ಲ ಎನ್ನುವ ಮೂಲಕ ಬರದ ತೀವ್ರತೆಯ ನೋವಿನಲ್ಲಿರುವ ರೈತರಿಗೆ ಸಾಂತ್ವನ ಹೇಳುವ ಬದಲಾಗಿ ಕಾಟಾಚಾರದ ವೀಕ್ಷಣೆ ನಡೆಸಿದ್ದಾರೆ ಎಂದು ಹೇಳಿದರು.

    ಸುದ್ದಿಗೋಷ್ಟಿಯಲ್ಲಿ ಜಿ.ಪಂ.ಮಾಜಿ ಸದಸ್ಯ ಸಿ.ಚಿಕ್ಕರಂಗ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಘಟಕದ ಅಧ್ಯಕ್ಷ ಚಾಮಲಾಪುರ ಹುಂಡಿಸಿದ್ಧರಾಜು, ನಗರಸಭೆ ಮಾಜಿ ಸದಸ್ಯರುಗಳಾದ ಮಹದೇವ ಪ್ರಸಾದ್, ಕಪಿಲೇಶ್, ಮುಖಂಡರಾದ ವಳಗೆರೆ ಪುಟ್ಟಸ್ವಾಮಿ, ರಾಘವೇಂದ್ರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಶೋಕಪುರಂಸಿದ್ಧರಾಜು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲುಪುರ ಸಿದ್ದರಾಜು, ವಿಷ್ಣು ಮೊದಲಾದವರು ಉಪಸ್ಥಿತರಿದ್ದರು.

ಚಿತ್ರ.

 ನಂಜನಗೂಡಿನ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿದರು.