Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಕಣ್ಮನ ಸೆಳೆಯುತ್ತಿದೆ ರಾಜ್ಯ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

ಗೌರಿ-ಗಣೇಶ ಹಬ್ಬಕ್ಕೆ ಕೈಮಗ್ಗದ ಮೆರುಗು

ಮೈಸೂರು:
ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವಂತೆ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಆಯೋಜಿಸಲಾಗಿರುವ “ಹಾತ್ ಕರ್ಗ್ 2026, ನನ್ನ ಕೈಮಗ್ಗ ನನ್ನ ಹೆಮ್ಮೆ” ರಾಜ್ಯ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಎಲ್ಲರನ್ನು ಕೈಬೀಸಿ ಕರೆದು ಕಣ್ಮನ ಸೆಳೆಯುತ್ತಿದೆ.
ನವದೆಹಲಿಯ ಅಭಿವೃದ್ಧಿ ಆಯುಕ್ತರು (ಕೈಮಗ್ಗ), ಜವಳಿ ಸಚಿವಾಲಯದ ಸಹಯೋಗದಲ್ಲಿ, ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ ಮತ್ತು ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್ ಆಶ್ರಯದಲ್ಲಿ ಮೇಳವನ್ನು ಆಯೋಜಿಸಲಾಗಿದೆ.
ನೇಕಾರರು ಹಾಗೂ ನೇಕಾರರ ಸಹಕಾರ ಸಂಘಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಮತ್ತು ಅವರ ಕೌಶಲ್ಯವನ್ನು ಜನರಿಗೆ ಪರಿಚಯಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ. ಮಧ್ಯವರ್ತಿಗಳಿಲ್ಲದೆ ನೇರವಾಗಿ ನೇಕಾರರಿಂದ ಉತ್ತಮ ಗುಣಮಟ್ಟದ ಕೈಮಗ್ಗ ಉತ್ಪನ್ನಗಳನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿಸುವ ಅವಕಾಶ ಗ್ರಾಹಕರಿಗೆ ದೊರೆಯುತ್ತಿದೆ.
ಕರ್ನಾಟಕದ ಮೈಸೂರು, ಚಾಮರಾಜನಗರ, ಬೆಂಗಳೂರು, ಬಾಗಲಕೋಟೆ, ಇಳಕಲ್ ಸೇರಿದಂತೆ ವಿವಿಧ ಭಾಗಗಳ ನೇಕಾರರು ಹಾಗೂ ದೇಶದ ವಿವಿಧ ರಾಜ್ಯಗಳ 60ಕ್ಕೂ ಹೆಚ್ಚು ಮಳಿಗೆಗಳು ಮೇಳಕ್ಕೆ ವಿಶೇಷ ಮೆರುಗು ತಂದಿವೆ. ಕರ್ನಾಟಕದ ಜೊತೆಗೆ ಜಮ್ಮು-ಕಾಶ್ಮೀರ, ದೆಹಲಿ, ರಾಜಸ್ಥಾನ, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಅಸ್ಸಾಂ ರಾಜ್ಯಗಳ ಕೈಮಗ್ಗ ಉತ್ಪನ್ನಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
ನಮ್ಮ ರಾಜ್ಯದ ರೇಷ್ಮೆ ಸೀರೆಗಳು ಇಳಕಲ್ ಮತ್ತು ಕಣ ಸೀರೆಗಳು, ಕಸೂತಿ ಸೀರೆಗಳು, ಕೊಳ್ಳೇಗಾಲದ ರೇಷ್ಮೆ ಹಾಗೂ ಕೈಮಗ್ಗ ಸೀರೆಗಳು, ತಮಿಳುನಾಡಿನ ಕಾಂಚೀವರA ರೇಷ್ಮೆ ಸೀರೆಗಳು, ವಾರಣಾಸಿಯ ಬನಾರಸಿ ಸೀರೆಗಳು, ಆಂಧ್ರಪ್ರದೇಶದ ಗಡ್ವಾಲ್, ಉಪ್ಪಾಡ ಹಾಗೂ ಕಲಂಕಾರಿ ಸೀರೆಗಳು, ಕಾಶ್ಮೀರದ ಪಶ್ಮಿನಾ ಶಾಲುಗಳು ಮತ್ತು ಪಶ್ಚಿಮ ಬಂಗಾಳದ ಬಾಲುಚರಿ ಹಾಗೂ ಕಾಂತಾವರ್ಕ್ ಸೀರೆಗಳು ಪ್ರಮುಖ ಆಕರ್ಷಣೆಯಾಗಿವೆ.
ಇದಲ್ಲದೆ ಬೆಡ್‌ಶೀಟ್‌ಗಳು, ನೆಲಹಾಸುಗಳು, ಮೇಲುಹೊದಿಕೆಗಳು, ಟವೆಲ್‌ಗಳು, ಕುಶನ್ ಕವರ್‌ಗಳು, ಕಸೂತಿ ಉತ್ಪನ್ನಗಳು ಹಾಗೂ ವಿವಿಧ ಕೈಮಗ್ಗ ಮತ್ತು ಕರಕುಶಲ ವಸ್ತುಗಳು ಮೇಳದಲ್ಲಿ ಲಭ್ಯವಿವೆ.
ನೇಕಾರ ಸೇವಾ ಕೇಂದ್ರ, ಬೆಂಗಳೂರು ವತಿಯಿಂದ ವಿಶೇಷ ಥೀಮ್ ಪೆವಿಲಿಯನ್ ನಿರ್ಮಿಸಲಾಗಿದ್ದು, ಮಗ್ಗದ ಮೂಲಕ ಸೀರೆ ನೇಯುವ ಪ್ರಾತ್ಯಕ್ಷಿಕೆಯನ್ನು ನೀಡಲಾಗುತ್ತಿದೆ. ರಾಜಸ್ಥಾನದ ನೇಕಾರರಿಂದ ಕೈಮಗ್ಗ ನೇಯ್ಗೆಯ ಪ್ರಾತ್ಯಕ್ಷಿಕೆಯೂ ನಡೆಯುತ್ತಿದ್ದು, ಇದು ಮೈಸೂರಿಗರಲ್ಲಿ ಸಾಂಪ್ರದಾಯಿಕ ನೇಯ್ಗೆ ಕಲೆಯ ಬಗ್ಗೆ ವಿಶೇಷ ಆಸಕ್ತಿ ಮೂಡಿಸುತ್ತಿದೆ.
ಒಂದೇ ಸೂರಿನಡಿ ದೇಶದ ವಿವಿಧ ಭಾಗಗಳ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳನ್ನು ಪರಿಚಯಿಸುವ ಈ ಮೇಳವು ಮೈಸೂರಿಗರಿಗೆ ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ನೇಕಾರರಿಂದ ಖರೀದಿಸುವ ಉತ್ತಮ ಅವಕಾಶ ಒದಗಿಸಿದೆ.
ಮೇಳವು ಸೆ. 8ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ.