
ಮೈಸೂರು: ಅಣಬೆ ಬೇಸಾಯವನ್ನು ಕೇವಲ ಕೃಷಿ ಚಟುವಟಿಕೆಯಾಗಿ ನೋಡದೆ, ಕಡಿಮೆ ಸ್ಥಳ ಮತ್ತು ಕಡಿಮೆ ಬಂಡವಾಳದಲ್ಲಿ ಆರಂಭಿಸಿ ಹೆಚ್ಚುವರಿ ಆದಾಯದ ಮೂಲವನ್ನಾಗಿ ಬೆಳೆಸಿಕೊಳ್ಳಬಹುದಾದ ಉದ್ಯಮವಾಗಿ ಪರಿಗಣಿಸಬೇಕು ಎಂದು ಹಾರ್ಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಹೇಳಿದರು.
ಮೈಸೂರಿನ ಹಾರ್ಟ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಅಣಬೆ ಬೇಸಾಯ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ಉದ್ಯೋಗಕ್ಕಾಗಿ ಕಾಯುವುದಕ್ಕಿಂತ, ನಮಗೇ ಉದ್ಯೋಗ ಸೃಷ್ಟಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಮನೆಯಲ್ಲಿರುವ ಸಣ್ಣ ಜಾಗದಿಂದಲೂ ಅಣಬೆ ಬೇಸಾಯ ಆರಂಭಿಸಿ, ಅನುಭವ ಮತ್ತು ಮಾರುಕಟ್ಟೆಯ ಅರಿವಿನೊಂದಿಗೆ ಹಂತ ಹಂತವಾಗಿ ವಿಸ್ತರಿಸಬಹುದು,” ಎಂದು ಹೇಳಿದರು.
ತರಬೇತಿ ಪಡೆಯುವುದಷ್ಟೇ ಸಾಕಾಗುವುದಿಲ್ಲ; ಕಲಿತ ಜ್ಞಾನವನ್ನು ಕಾರ್ಯರೂಪಕ್ಕೆ ತರುವುದು ಮುಖ್ಯ. ತರಬೇತಿಯ ನಂತರ ಸಣ್ಣ ಪ್ರಮಾಣದಲ್ಲಿ ಘಟಕ ಆರಂಭಿಸಿ, ವೆಚ್ಚ, ಉತ್ಪಾದನೆ ಮತ್ತು ಮಾರಾಟದ ಸಮರ್ಪಕ ಲೆಕ್ಕಪತ್ರ ನಿರ್ವಹಿಸುವುದರ ಜೊತೆಗೆ, ಉತ್ಪಾದನೆಗೂ ಮುನ್ನ ಮಾರುಕಟ್ಟೆಯನ್ನು ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಅಣಬೆ ಬೇಸಾಯದ ಪ್ರಾಯೋಗಿಕ ವಿಧಾನಗಳು, ಉತ್ಪಾದನೆ, ನಿರ್ವಹಣೆ, ಮಾರುಕಟ್ಟೆ ಹಾಗೂ ಉದ್ಯಮದ ಸಾಧ್ಯತೆಗಳ ಕುರಿತು ತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಪ್ರಸನ್ನ ಅಣಬೆ ಬೆಳೆಯ ಬಗ್ಗೆ ತಿಳಿಸಿದರು ಮತ್ತು ಪ್ರಯೋಗಿಕವಾಗಿ ತರಬೇತಿ ನೀಡಿದರು,
ತರಬೇತಿ ಕಾರ್ಯಾಗಾರದಲ್ಲಿ ಮೈಸೂರು ನಗರ ಮತ್ತು ವಿವಿಧ ತಾಲ್ಲೂಕಿನಿಂದ ಯುವಕರು, ಮಹಿಳೆಯರು ಹಾಗೂ ಕೃಷಿಕರು ಭಾಗವಹಿಸಿ ತರಬೇತಿಯನ್ನು ಪಡೆದುಕೊಂಡರು. ಹಾರ್ಟ್ ಸಂಸ್ಥೆ ಸಂಯೋಜಕ ಶಿವಲಿಂಗ, ಸಂಸ್ಥೆ ಸಿಬ್ಬಂದಿ ವರ್ಗದವರು ಇದ್ದರು.