
ಪಿರಿಯಾಪಟ್ಟಣ : ಅರಣ್ಯ ಸಂರಕ್ಷಣೆಯ ಉಪ ವಿಭಾಗ ಅಧಿಕಾರಿ ಕಿರಣ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ತಾಲ್ಲೋಕಿನ ತಾತನಹಳ್ಳಿ ಗ್ರಾಮದ ದೊಡ್ಡಕೆರೆ ಅಂಗಳದಲ್ಲಿರುವ ವಿವಿಧ ಜಾತಿಯ ಮರಗಳನ್ನು ಹರಾಜು ಮಾಡುವ ಪ್ರಕ್ರಿಯೆಗೆ ಸಾರ್ವಜನಿಕ ಸಲಹಾ ಸಭೆಯನ್ನು ಕರೆಯಲಾಗಿತ್ತು.
ಅರಣ್ಯ ಅಧಿಕಾರಿ ಕಿರಣ್ ಕುಮಾರ್ ಮಾತನಾಡಿ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿನ ಮರಗಳ ತೆರವಿಗೆ ಕಡ್ಡಾಯವಾಗಿ ಇಲಾಖೆ ಮತ್ತು ಸಾರ್ವಜನಿಕರ ಸಲಹಾ ಸಭೆ ನಡೆಸಬೇಕಾಗುತ್ತದೆ. ಈ ಸಭೆಯಲ್ಲಿ ಹರಾಜು ಪ್ರಕ್ರಿಯೆಗೆ ಅನುಮೋದನೆ ಪಡೆದುಕೊಳ್ಳಲಾಗುತ್ತದೆ. ತಾತನಹಳ್ಳಿ ಗ್ರಾಮದ ದೊಡ್ಡಕೆರೆ ಅಂಗಳದಲ್ಲಿರುವ ಹಲವಾರು ವಿವಿಧ ಜಾತಿಯ ಮರಗಳು ಕೆರೆಯಲ್ಲಿ ನಿರಂತರವಾಗಿ ನೀರು ತುಂಬಿರುವ ಪರಿಣಾಮ ಸದಾ ಕಾಲ ಭೂಮಿಯ ತೇವಾಂಶದಿಂದ ಮರಗಳು ಅಭಿವೃದ್ಧಿಯಾಗದೆ ಕ್ಷೀಣಿಸುತ್ತಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಈ ಮರಗಳ ತೆರವಿಗೆ ಮನವಿ ಸಲ್ಲಿಸಿದ್ದಾರೆ. ಈ ಕಾರಣದಿಂದ ಸ್ಥಳ ಪರಿಶೀಲಿಸಿ ಸಾರ್ವಜನಿಕರ ಸಲಹೆ ಪಡೆಯಲು ಇಂದು ವಿವಿಧ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯಲಾಗಿದೆ.ಮರಗಳನ್ನು ತೆರವುಗೊಳಿಸಲು ಸಾರ್ವಜನಿಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದಲ್ಲಿ ಈ ಮರಗಳ ಹರಾಜು ಪ್ರಕ್ರಿಯೆ ಮಾಡಲಾಗುತ್ತದೆ ಎಂದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಟಿ. ಈರಯ್ಯ ಮಾತನಾಡಿ ಬೆಳವಣಿಗೆಯಾಗದ ಈ ಮರಗಳ ತೆರವಿಗೆ ನಾವು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಈ ಮರಗಳ ತೆರೆವಿನಿಂದಾಗಿ ಬರುವ ಆದಾಯವು ಇಲಾಖೆಗೆ ಸೇರಲಿದ್ದು,ಅದರಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಹರಾಜು ಪ್ರಕ್ರಿಯೆಗೆ ಸಾರ್ವಜನಿಕರು ಒಮ್ಮತದ ಒಪ್ಪಿಗೆ ನೀಡುತ್ತಿದ್ದು ಮರಗಳ ಹರಾಜಿಗೆ ಅಧಿಕಾರಿಗಳು ಕ್ರಮ ವಹಿಸಬಹುದು ಎಂದರು.
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಪದ್ಮ ಶ್ರೀ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರುಣಾಕರ್,ಕಾರ್ಯದರ್ಶಿ ಚನ್ನಪ್ಪ,ಮಾಜಿ ಗ್ರಾ.ಪಂ. ಉಪಾಧ್ಯಕ್ಷ ನಂಜುಂಡೇಗೌಡ, ಮಾಜಿ ಸದಸ್ಯ ಸೋಮಶೇಖರ್, ಮಲ್ಲಿಕಾರ್ಜುನ,
ಗ್ರಾಮಸ್ಥರಾದ ನಾಗಯ್ಯ, ದೊಡ್ಡ ಸ್ವಾಮಿ, ಪುಟ್ಟಯ್ಯ, ಶ್ರೀನಿವಾಸ್ ಸೇರಿದಂತೆ ಇತರರಿದ್ದರು.