Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

ಎಚ್. ಡಿ.ಕೋಟೆ :  ನೀಲಿ ಶಾಲು ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ದಲಿತ ಸಂಘರ್ಷ ಸಮಿತಿ ಹೋರಾಟ ಪ್ರಶ್ನಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ತಾಲೂಕಿನ ಹ್ಯಾಂಡ್ ಪೋಸ್ಟ್ ಸಮೀಪ ಮಾನವ ಸರಪಳಿ ನಿರ್ಮಿಸಿ ದಲಿತ ಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು. 

ಹ್ಯಾಂಡ್ ಪೋಸ್ಟ್ ಸರ್ಕಲ್ ಮುಂದೆ ಜಮಾಯಿಸಿದ ದಲಿತ ಪರ ಸಂಘಟನೆಗಳ ಸದಸ್ಯರು ಪ್ರತಾಪ್ ಸಿಂಹ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಾಪ್ ಸಿಂಹ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.   ಕೂಡಲೇ ಪ್ರತಾಪ್ ಸಿಂಹ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜೈಲಿಗಟ್ಟಬೇಕೆಂದು ಪ್ರತಿಭಟನಾಕಾರರು  ಒತ್ತಾಯ ಮಾಡಿದರು. 

ನೀಲಿ ಶಾಲು ಬಗ್ಗೆ  ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ಖಂಡನೀಯ. ನೀಲಿ ಶಾಲು ದಲಿತರ ಹೋರಾಟದ ಅಸ್ಮಿತೆಯಾಗಿದ್ದು, ಸಂವಿಧಾನ ಶಿಲ್ಪಿ ಡಾ.. ಬಿ.ಆರ್ ಅಂಬೇಡ್ಕರ್ ಅವರಿಂದ ನಮಗೆ ಬಂದಿದೆ.  ನಮ್ಮ ಹೋರಾಟವನ್ನು ಪ್ರಶ್ನಿಸುವ ನೀಲಿ ಶಾಲು ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆ ಪ್ರತಾಪ್ ಸಿಂಹ ಅವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದೊಳಗೆ ಮೂಲೆಗುಂಪಾಗಿರುವ ಪ್ರತಾಪ್ ಸಿಂಹ ಅವರು, ಸಮಾಜ, ಧರ್ಮ ಹಾಗೂ  ಜಾತಿಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ದಕ್ಷ ಅಧಿಕಾರಿ ಧನಂಜಯ್ ವಿರುದ್ಧ ಏಕವಚನ ಪ್ರಯೋಗಿಸಿ, ಅವರ ಮನೋಸ್ತೆರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿಯೊಂದರಲ್ಲೂ ಕೋಮುವಾದ ಹುಡುಕಿ ಕೆದಕಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರತಾಪ್ ಸಿಂಹ ಅವರು ಕೂಡಲೇ ಡಿಎಸ್ ಎಸ್ ಬಗ್ಗೆ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಡಿಎಸ್ ಎಸ್ ತಕ್ಕ ಪಾಠ ಕಲಿಸಲಿದೆ ಎಂದು ದಲಿತ ಪರ ಸಂಘಟನೆಗಳ ಮುಖಂಡ ನರಸಿಂಹಮೂರ್ತಿ ಎಚ್ಚರಿಕೆ ನೀಡಿದರು. 

ಮುಖಾಮುಖಿ ಚರ್ಚೆಗೆ ಆಹ್ವಾನ ;

ಕೆಲ ಕಿಡಿಗೇಡಿಗಳು ಎಲ್ಲೋ ಕುಳಿತುಕೊಂಡು ಸಾಮಾಜಿಕ ಜಾಲತಾಣದಲ್ಲಿ ಡಿಎಸ್ ಎಸ್  ಹಾಗೂ ನನ್ನ ಬಗ್ಗೆ ಕೆಟ್ಟ ಕೆಟ್ಟ  ಕಾಮೆಂಟ್ ಹಾಕುತ್ತಿದ್ದಾರೆ. ನಕಲಿ ಅಕೌಂಟ್ ಗಳ ಮೂಲಕ  ಎಲ್ಲೋ ಕುಳಿತಿಕೊಂಡು ಪ್ರತಾಪ್ ಸಿಂಹ ಪರ ಕಾಮೆಂಟ್ ಮಾಡೋದಲ್ಲ, ನಿಮಗೆ, ದಮ್ಮು, ತಾಕತ್ ಇದ್ರೆ ಹೆಚ್ ಡಿ ಕೋಟೆಗೆ ಬನ್ನಿ ಚರ್ಚೆ ಮಾಡೋಣ. ಡಿಎಸ್ ಎಸ್ ಏನು ಮಾಡಿದೆ, ಪ್ರತಾಪ್ ಸಿಂಹ ಏನು ಕಿತ್ತು ಹಾಕಿದ್ದಾರೆ ಎಂಬುದರ ಬಗ್ಗೆ ಮುಖಾಮುಖಿ ಚರ್ಚೆ ಮಾಡೋಣ ಎಂದು ನರಸಿಂಹಮೂರ್ತಿ ಸವಾಲು ಹಾಕಿದರು. ಅಲ್ಲದೆ ಕೆಟ್ಟದಾಗಿ ಕಾಮೆಂಟ್ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುವ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು. 

ಟ್ರಾಫಿಕ್ ಜಾಮ್ : ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಾಲ್ಕು ಮಾರ್ಗಗಳಲ್ಲೂ ವಾಹನಗಳು ಕಿಲೋ ಮೀಟರ್ ದೂರದವರೆಗೆ ನಿಂತಲ್ಲೇ ನಿಂತಿದ್ದವು. ಕೊನೆಗೆ ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್ ಅವರು ಪ್ರತಿಭಟನಾಕಾರರ ಮನವೊಲಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.