
ಪಿರಿಯಾಪಟ್ಟಣ:ಭಾರತ ದೇಶ ಕೃಷಿ ಪ್ರಧಾನ ದೇಶವಾಗಿದ್ದು, ಇಲ್ಲಿನ ಸಹಕಾರ ಸಂಘಗಳು ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿವೆ ಎಂದು ಸಹಕಾರ ಸಂಘದ ಅಧ್ಯಕ್ಷ ಆವರ್ತಿ ಸೋಮಶೇಖರ್ ತಿಳಿಸಿದರು.
ತಾಲೂಕಿನ ಕೊಪ್ಪ ರೈತರ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಆಯಾ ವ್ಯಾಪ್ತಿಯಲ್ಲಿನ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ರೈತರ ಜೀವನಾಡಿಯಾಗಿವೆ.
ನಮ್ಮ ಸಂಘದಲ್ಲಿ 2800 ಕ್ಕೂ ಅಧಿಕ ರೈತರು ಸದಸ್ಯತ್ವ ಪಡೆದಿದ್ದು, ಇವರಿಗೆ ಬೆಳೆ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ ಹಾಗಾಗಿ ರೈತರು ಕೂಡ ಪ್ರಾಮಾಣಿಕವಾಗಿ ಸಕಾಲದಲ್ಲಿ ಎಲ್ಲರೂ ಸಾಲ ಮರು ಪಾವತಿಸಿದ್ದಾರೆ, ಸಂಘಕ್ಕೆ 51 ಲಕ್ಷ ಲಾಭ ಬಂದಿದೆ. ಸಹಕಾರ ಸಂಘದಿಂದ ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ಸಾಲ ನೀಡಿ, ಅವರ ವ್ಯಾಪಾರ ಅಭಿವೃದ್ಧಿಗೆ ಸಹಕರಿಸಲಾಗಿದೆ. ಅಲ್ಲದೆ, ಸಂಘದಲ್ಲಿ ಗ್ರಾಹಕರಿಂದ ಮುದ್ದತ್ ಠೇವಣಿ ಹಣ ಸಂಗ್ರಹಿಸಲಾಗಿದೆ. ನ್ಯಾಯಬೆಲೆ ಅಂಗಡಿ ಮೂಲಕ ಅರ್ಹ ಫಲಾನುಭವಿಗಳಿಗೆ ಆಹಾರ ಧಾನ್ಯಗಳ ವಿತರಣೆ ಮಾಡಲಾಗುತ್ತಿದೆ ಎಂದರು.
ಈ ವರ್ಷ ಮುಂಗಾರುಮಳೆ ದುರ್ಬಲವಾಗಿರುವುದರಿಂದ ರೈತಾಪಿವರ್ಗ ಸಂಕಷ್ಟದಲ್ಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಂಘದಿಂದ ಹೆಚ್ಚಿನ ಆರ್ಥಿಕ ಸಾಲ ನಿರೀಕ್ಷೆಯಲ್ಲಿದ್ದಾರೆ. ನಾವು ಆಡಳಿತ ಮಂಡಳಿಯವರು ರೈತರ ನಿಯೋಗದೊಂದಿಗೆ SBIಬ್ಯಾಂಕ್ ಕುಶಾಲನಗರ ಅಧಿಕಾರಿಗಳನ್ನು ಭೇಟಿಯಾಗಿ ಸಂಘಕ್ಕೆ ಹೆಚ್ಚಿನ ಆರ್ಥಿಕ ಸಹಾಯ ನೀಡಲು ಮನವಿ ಮಾಡುತ್ತೇವೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೈತರಿಗೆ ಹಾಗೂ ಮಹಿಳೆಯರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಸಾಲ ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಸುವರ್ಣ ಮಹೋತ್ಸವದ ಪ್ರಯುಕ್ತ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು, ಇದೇ ಸಂದರ್ಭದಲ್ಲಿ ಸಮುದಾಯ ಭವನದ ನಿರ್ಮಾಣದ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಕೆ.ಎಸ್.ಲೀಲಾವತಿ ಹಾಗೂ ಸಹಾಯಕ ಅಧಿಕಾರಿ ಪಿ.ಎನ್.ಸೋಮಶೇಖರ್ 2025-26 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಮೋಹನ್ ರಾಜ್, ನಿರ್ದೇಶಕರಾದ ಕಲ್ಯಾಣಪ್ಪ, ಅಲ್ಲಾವುದ್ದೀನ್, ಅಶೋಕ್ ಕುಮಾರ್, ಚಂದ್ರೇಗೌಡ, ತಾರಾ, ಮಂಜು, ಶಿವಪ್ಪ, ಸುಬ್ರಹ್ಮಣ್ಯ, ಸುಮಿತ್ರಾ, ಅನಿಲ್ ರಾಜ್ ಸಿಬ್ಬಂದಿಗಳಾದ ಕುಮಾರಪ್ಪ, ಗಾಯತ್ರಿದೇವಿ, ನಿತಿನ್, ಶ್ಯಾಂ ಸುಂದರ, ಜಗದೀಶ್, ತಮ್ಮಣ್ಣ ಶೆಟ್ಟಿ, ಉಮಾ ಮಹೇಶ್ವರ, ರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.