
ಮೈಸೂರು: ‘ಎಲ್ಲ ಧರ್ಮಗಳೂ ಮನುಷ್ಯತ್ವವನ್ನು ಬೋಧಿಸುತ್ತವೆ. ಮನುಷ್ಯ, ಮನುಷ್ಯನನ್ನು ಪ್ರೀತಿಸುವುದೇ ನಿಜವಾದ ಮಾನವ ಧರ್ಮ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾನುವಾರ ನಗರದ ಜಗಮ್ಮೋಹನ ಅರಮನೆ ಸಭಾಂಗಣದಲ್ಲಿ ಭಾನುವಾರ ‘ಜಮಾಅತೆ ಇಸ್ಲಾಮಿ ಹಿಂದ್’ನಿAದ ಆಯೋಜಿಸಿದ್ದ ‘ಪ್ರವಾದಿ ಮುಹಮ್ಮದ್ ಕ್ರಾಂತಿಯ ಜ್ಯೋತಿ ಸೀರತ್ ಸಮಾವೇಶ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಎಲ್ಲ ಧರ್ಮಗಳೂ ಮನುಷ್ಯತ್ವವನ್ನು ಬೋಧಿಸುತ್ತವೆ. ಹಾಗಾಗಿ ಎಲ್ಲವೂ ಸಮಾನವಾದವು. ಮಾನವರೆಲ್ಲ ಒಂದೇ. ಪರಸ್ಪರ ಪ್ರೀತಿಸಬೇಕೇ ಹೊರತು, ದ್ವೇಷಿಸಬಾರದು ಎಂದರು.
‘ದೇಶದಲ್ಲಿ ವಾಸಿಸುವವರೆಲ್ಲಾ ಭಾರತೀಯರು. ಅವರೆಲ್ಲರಿಗೂ ಸಮಪಾಲು, ಸಮಬಾಳು ದೊರೆಯಬೇಕು. ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಶಕ್ತಿ ಬರಬೇಕು. ಇದೆಲ್ಲವೂ ಕೇವಲ ಭಾಷಣದಿಂದ ಸಾಧ್ಯವಾಗುವುದಿಲ್ಲ. ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಿದಾಗ ಮಾತ್ರ ಆಗುತ್ತದೆ’ ಎಂದು ಹೇಳಿದರು.
‘ಪಟ್ಟಭದ್ರರು ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುತ್ತಾರೆ. ಅವರು ಹಿಂದೆಯೂ ಇದ್ದರು; ಈಗಲೂ ಇದ್ದಾರೆ. ಈ ಕಾರಣದಿಂದ ನಾವೆಲ್ಲರೂ ಜಾತಿ, ಧರ್ಮಗಳ ಗೊಂದಲದಲ್ಲೇ ಸಿಲುಕಿ ನರಳುತ್ತಿದ್ದೇವೆ. ನಾನು ತಂದಿದ್ದ ಮೌಢ ಪ್ರತಿಬಂಧಕ ಕಾಯ್ದೆ ಸಂಪೂರ್ಣ ಜಾರಿಯಾಗದಂತೆ ಪಟ್ಟಭದ್ರ ಹಿತಾಸಕ್ತಿಗಳು ನೋಡಿಕೊಳ್ಳುತ್ತಿವೆ’ ಎಂದು ಕಿಡಿಕಾರಿದರು.
ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಆದ್ಯತೆ ನೀಡುವ ಕೆಲಸವನ್ನು ಆರಂಭಿಸಿದೆ. ಪ್ರಸ್ತುತ ೪,೭೯೦ ಕೋಟಿ ಕೊಡುತ್ತಿದ್ದೇವೆ. ಬಿಜೆಪಿ ಸರ್ಕಾರದಲ್ಲಿ ಇದ್ದದ್ದು ೪೦೦ ಕೋಟಿ ಮಾತ್ರ. ಸಿವಿಲ್ ಕಾಮಗಾರಿಗಳ ಗುತ್ತಿಗೆಯಲ್ಲಿ ಮೀಸಲಾತಿ, ಬ್ಯಾಕ್ಲಾಗ್ ಹುದ್ದೆ ಭರ್ತಿ, ಸ್ಥಳೀಯ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಡಿಸಿದೆ. ಹೀಗಾಗಿ, ಯಾರು ನಮ್ಮ ಜೊತೆ ನಿಲ್ಲುತ್ತಾರೆ ಎಂಬುದನ್ನು ಅಲ್ಪಸಂಖ್ಯಾತರು ತಿಳಿದುಕೊಳ್ಳಬೇಕು’. ‘ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರು ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಬೇಕು’ ಎಂದು
ಎಂದು ಹೇಳಿದರು.
ಸಮಾವೇಶವನ್ನು ಉದ್ಘಾಟಿಸಿದ ವಾಟಾಳು ಸೂರ್ಯಸಿಂಹಾಸನ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ನನ್ನನ್ನು ಮುಸ್ಲಿಮರ ಶ್ರೀಗಳು ಎಂದೇ ಕರೆಯುತ್ತಾರೆ. ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವುದೇ ಇದಕ್ಕೆ ಕಾರಣ. ಎಲ್ಲ ಸಮಾಜವನ್ನೂ ತಿದ್ದಬೇಕು ಎಂದು ಬಯಸುವ ಒಳ್ಳೆಯ ಸಮಾಜವಿದು. ಎಲ್ಲರೂ ಪ್ರೀತಿಯಿಂದ ಇದ್ದರೆ, ತಾರತಮ್ಯ ಇರದು. ಸರ್ವ ಧರ್ಮ ಸಮನ್ವಯ ಆಗಬೇಕು’ ಎಂದು ಆಶಿಸಿದರು.
ಸೇಂಟ್ ಫಿಲೋಮಿನಾ ಚರ್ಚ್ನ ಪ್ರಧಾನ ಗುರು ಸ್ಕಾ÷್ಯನಿ ಅಡಾ ಮಾತನಾಡಿ, ‘ಯಾವ ಧರ್ಮವೂ ಕೆಟ್ಟದ್ದನ್ನು ಹೇಳುವುದಿಲ್ಲ. ನಾವೆಲ್ಲರೂ ಜಗತ್ತಿಗೆ ಬೆಳಕನ್ನಷ್ಟೆ ನೀಡಬೇಕು’ ಎಂದು ಕಿವಿ ಮಾತು ಹೇಳಿದರು.
ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮಾತನಾಡಿ, ‘ಬೇರೆ ಧರ್ಮ ಗೌರವಿಸದವರು, ಅವರ ಧರ್ಮಕ್ಕೆ ನ್ಯಾಯ ಒದಗಿಸುವುದಿಲ್ಲ. ಧಾರ್ಮಿಕ ವಿಚಾರದಲ್ಲಿ ಅಪಸ್ವರ, ಅಪನಂಬಿಕೆ ಜಾಸ್ತಿ ಆಗುತ್ತಿದೆ. ಇದು ತಪ್ಪಬೇಕು. ಮುಸ್ಲಿಮರು ಗುಜರಿ, ಸೈಕಲ್ ಶಾಪ್ ಕೆಲಸವನ್ನಷ್ಟೆ ಮಾಡಿ ಎಂದು ಯಾವ ಧರ್ಮವೂ ಹೇಳಿಲ್ಲ. ಶಿಕ್ಷಣ ಪಡೆದು ಮುಂದೆ ಬರಬೇಕು’ ಎಂದು ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಮಾತನಾಡಿ, ‘ಕರುಣೆ ಬತ್ತಿರುವ ಕಾಲದಲ್ಲಿ ನಾವಿದ್ದೇವೆ. ದ್ವೇಷ, ಹಗೆತನ ಜಾಸ್ತಿ ಆಗುತ್ತಿದೆ. ಹೀಗಾಗಿ, ಯುವಜನರಿಗೆ ಕರುಣೆ, ಪ್ರೀತಿಯನ್ನು ಬೋಧಿಸುತ್ತಲೇ ಇರಬೇಕು. ಸತ್ಯವನ್ನು ಬಹಳ ಜೋರಾಗಿ ಹೇಳಬೇಕು’ ಎಂದರು.
ಸಮಾವೇಶದ ಸಾನ್ನಿಧ್ಯವನ್ನು ಧರ್ಮಗುರು ಮುಹಮ್ಮದ್ ಉಸ್ಮಾನ್ ಪರೀಫ್ ವಹಿಸಿದ್ದರು. ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಅಧ್ಯಕ್ಷ ಬೆಳಗಾಮಿ ಮುಹಮ್ಮದ್ ಸಾದ್ ವಹಿಸಿದ್ದರು.
ಸಮಾವೇಶದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕೆಪಿಸಿಸಿ ವಕ್ತಾರ ಎಂ. ಲಕ್ಷ÷್ಮಣ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬೀರಿಹುಂಡಿ ಬಸವಣ್ಣ, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಪತ್ರಕರ್ತ ಟಿ.ಗುರುರಾಜ್, ಸಾಮಾಜಿಕ ಕಾರ್ಯಕರ್ತೆ ಸವಿತಾ ಪ.ಮಲ್ಲೇಶ್, ನಿವೃತ್ತ ಡಿವೈಎಸ್ಪಿ ಸುಹೇಲ್ ಅಹಮದ್ ಮರೂರ್, ಜೆಎಸ್ಎಎಎಚ್ಇಆರ್ನ ಪ್ರೀತಿ ಮಹದೇವ್, ಮೊಹಮ್ಮದ್ ನದ್ದಿ, ಮಹಮ್ಮದ್ ಸಾದಿಕ್, ಉದ್ಯಮಿ ಸಿದ್ದಿಕ್ ಅಹಮದ್, ನಯೀಮ್ ಉಲ್ಲಾ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮು, ಜಿಲ್ಲಾ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ, ಜೆಐಎಚ್ ಮೈಸೂರು ಅಧ್ಯಕ್ಷ ಮೊಹಮ್ಮದ್ ಅಸ್ಲಾ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.