
ಮೈಸೂರು; ಇಲ್ಲಿನ ಜನಜಾಗರಣ ಟ್ರಸ್ಟ್ ವತಿಯಿಂದ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಮಂಥನ ಕಾರ್ಯಕ್ರಮದಲ್ಲಿ “ಕಾಶ್ಮೀರ ಗಡಿಯಲ್ಲಿನ ಸತ್ಯ ಸಂಗತಿಗಳು” ಎಂಬ ವಿಷಯದ ಕುರಿತು ಅತ್ಯಂತ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳಲಾಯಿತು.
ಲೇಖಕ ಉಮೇಶ್ ಎಸ್. ಅವರು ಗಡಿಯಲ್ಲಿ ಹಿಂದೆ ನಡೆದ ಮಹತ್ವದ ಘಟನೆಗಳನ್ನು ತೆರೆದಿಟ್ಟರು.
೧೯೪೭ರ ಅಕ್ಟೋಬರ್ನಲ್ಲಿ ನಡೆದ ಕಬಾಲಿಗಳ ಆಕ್ರಮಣದ ಕ್ರೂರ ಇತಿಹಾಸದ ಬಗ್ಗೆ ವಿವರಿಸಿದರು. ಅಂದು ಬಾರಾಮುಲ್ಲಾ ತಲುಪಿದ್ದ ಕಬಾಲಿಗಳು ಮಾಡಿದ ಅತ್ಯಾಚಾರ, ಲೂಟಿ ಮತ್ತು ದೌರ್ಜನ್ಯಗಳ ಭೀಕರತೆಯನ್ನು ತಿಳಿಸಿದರು. ಪಾಕಿಸ್ತಾನಿ ಕಮಾಂಡರ್ ಖುರ್ಷಿದ್ ಅನ್ವರ್ ಕಬಾಲಿಗಳಿಗೆ ಹಣ ನೀಡದಿದ್ದಾಗ ಅವರು ಲೂಟಿ ಆರಂಭಿಸಿದ ಸಂದರ್ಭ ಹಾಗೂ ಕಬಾಲಿಗಳ ಆಕ್ರಮಣವನ್ನು ಎದುರಿಸಿ ನಿಂತ ಅಪ್ರತಿಮ ದೇಶಭಕ್ತ ಮಕ್ಬೂಲ್ ಶೇರ್ವಾನಿ ಅವರ ಬಲಿದಾನವನ್ನು ಸ್ಮರಿಸಿದರು. ಅಪ್ಪಟ ಭಾರತೀಯನಾಗಿದ್ದ ಶೇರ್ವಾನಿ, ಕಬಾಲಿಗಳಿಗೆ ತಪುö್ಪ ದಾರಿ ತೋರಿಸಿ, ಭಾರತೀಯ ಸೇನೆಗೆ ನೆರವಾಗಿದ್ದಕ್ಕಾಗಿ ಉಗ್ರರು ಅವರನ್ನು ಕ್ರೂರವಾಗಿ ಕೊಂದ ಇತಿಹಾಸವನ್ನು ತೆರೆದಿಟ್ಟರು.
ಕಾಶ್ಮೀರದಲ್ಲಿ ಈ ಹಿಂದೆ ಸಂಭವಿಸಿದ ಕಹಿ ಘಟನೆಗಳು ಮತ್ತು ಪಾಕಿಸ್ತಾನ ಪ್ರೇರಿತ ಭಯೋತ್ಪಾದನಾ ಚಟುವಟಿಕೆಗಳ ಇತಿಹಾಸವನ್ನು ತಮ್ಮ ವ್ಯಾಖ್ಯಾನದಲ್ಲಿ ಹೇಳಿದರು. ಟಿಟ್ವಾಲಾದಿಂದ ಕೇವಲ ೧೦ ಕಿಲೋಮೀಟರ್ ದೂರದಲ್ಲಿದ್ದ ಭಯೋತ್ಪಾದಕ ಶಿಬಿರಗಳು ಮತ್ತು ಶ್ರೀನಗರದ ಸೂಕ್ಷ÷್ಮ ಪ್ರದೇಶಗಳಲ್ಲಿ ನಡೆಯುತ್ತಿದ್ದ ಕಲ್ಲು ತೂರಾಟ ಹಾಗೂ ರಾತ್ರಿಯ ಶೆಲ್ ದಾಳಿಗಳ ಭೀಕರತೆಯನ್ನು ಅವರು ಮಂಥನದಲ್ಲಿ ನೆನಪಿಸಿದರು. ಬಿಟ್ಟಾ ಕರಾಟೆ ಮತ್ತು ಯಾಸಿನ್ ಮಲಿಕ್ ಅವರು ಅಲ್ಲಿನ ಯುವಜನತೆಯ ಮನಸ್ಸನ್ನು ಪ್ರಚೋದಿಸುತ್ತಿದ್ದರು . ಇಂತಹ ಪ್ರತ್ಯೇಕತಾವಾದಿಗಳ ಪ್ರಭಾವದಿಂದಾಗಿ ಕಾಶ್ಮೀರಿ ಪಂಡಿತರು ಎದುರಿಸಿದ ಸಂಕಷ್ಟಗಳು ಹಾಗೂ ಹಜರತ್ಬಾಲ್ ಮಸೀದಿಯ ಬಳಿ ನಡೆದ ಉಗ್ರರ ದಾಳಿಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ತೋರಿದ ಸಾಹಸವನ್ನು ಇಲ್ಲಿ ಮೆಲುಕು ಹಾಕಿದರು.
ಹಿಮಪಾತದ ನಡುವೆ, -೨೫ ಡಿಗ್ರಿ ಸೆಲ್ಸಿಯಸ್ನಷ್ಟು ಅತ್ಯಂತ ಶೀತಲ ವಾತಾವರಣ ಇರುವ ೧೬,೦೦೦ ಅಡಿ ಎತ್ತರದ ಗಡಿ ಪೋಸ್ಟ್ಗಳಲ್ಲಿ ಸೈನಿಕರು ‘ಫ್ರಾಸ್ಟ್ ಬೈಟ್’ ನಂತಹ ತೀವ್ರ ಆರೋಗ್ಯ ಸಮಸ್ಯೆಗಳ ನಡುವೆಯೂ, ದೇಶ ಕಾಯ್ದ ಇತಿಹಾಸವನ್ನು ವಿವರಿಸಿದರು. ಉರಿ, ಪುಲ್ವಾಮಾ ಮತ್ತು ಹಾಜಿ ಪೀರ್ ಪಾಸ್ನಂತಹ ದುರ್ಗಮ ಗಡಿಭಾಗಗಳಲ್ಲಿ ಭಾರತೀಯ ಪಡೆಗಳು ತೋರಿದ ವೀರಾವೇಶ ಹಾಗೂ ತಾಷ್ಕೆಂಟ್ ಒಪ್ಪಂದದವರೆಗಿನ ರಾಜತಾಂತ್ರಿಕ ಇತಿಹಾಸವನ್ನು ಪ್ರಸ್ತುತಪಡಿಸಿದರು.
ತಾವು ವಿಮಾನದಲ್ಲಿ ಪ್ರಯಾಣಿಸುವಾಗ ಆದ ಒಂದು ವಿಶೇಷ ಭಾವನಾತ್ಮಕ ಅನುಭವವನ್ನು ಹಂಚಿಕೊAಡರು. ವಿಮಾನದಲ್ಲಿ ಕಾಶ್ಮೀರದಿಂದ ಪ್ರಯಾಣಿಸುವಾಗ ಅಲ್ಲಿನ ಪ್ರಮುಖ ಬೆಟ್ಟಗಳನ್ನು ನೋಡುವಾಗ ಒಂದು ರೀತಿಯ ನೋವು ಕಾಡುತ್ತದೆ ಮತ್ತು ಆ ಮಂಜಿನ ಬೆಟ್ಟಗಳ ಮೇಲೆ ನಮ್ಮ ಹೆಮ್ಮೆಯ ಸೈನಿಕರು ದೇಶಕ್ಕಾಗಿ ನಿಂತಿದ್ದಾರಲ್ಲ ಎಂದು ಯೋಚಿಸಿದರೆ, ಕಣ್ಣಿನಲ್ಲಿ ನೀರು ತುಂಬಿ ಬರುತ್ತದೆ ಎಂದು ಭಾವುಕರಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನು ಆರ್ ವಾಸುದೇವ ಭಟ್ ವಹಿಸಿದ್ದರು. ನಿರಂಜನ್ ವಾನಳ್ಳಿ ಉಪಸ್ಥಿತರಿದ್ದರು. ಸಚಿನ್ ಗೋಗಟೆ ಪ್ರಾರ್ಥನೆ, ನಿರೂಪಣೆಯನ್ನು ಸುಹಾಸ್ ಕರ್ವೆ ಅವರು ನಡೆಸಿಕೊಟ್ಟರು.