
ಮೈಸೂರು : ಎನ್ಎಸ್ಎಸ್ ಚಟುವಟಿಕೆಯು ವಿದ್ಯಾರ್ಥಿಗಳಿಗೆ ಸಹಿಷ್ಣುತೆ, ಒಳಗೊಳ್ಳುವಿಕೆ ಗುಣವನ್ನು ಕಲಿಸುತ್ತದೆ ಎಂದು ಮೈಸೂರು ವಿವಿ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಸಂಯೋಜಕ ಡಾ.ಎಂ.ಬಿ. ಸುರೇಶ್ ತಿಳಿಸಿದರು.
ಮೈಸೂರಿನ ಎಸ್ಜೆಸಿ ಕಾಲೇಜು ಆವರಣದ ಜೆಎಸ್ಎಸ್ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಎನ್ಎಸ್ಎಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು,
ಗಾಂಧೀಜಿ ಪರಿಕಲ್ಪನೆಯ ಸಂದೇಶವನ್ನು ಸಾರುವ ಎನ್ಎಸ್ಎಸ್ ಶಿಬಿರಗಳು ನಮ್ಮನ್ನು ನಾವೇ ಪ್ರಯೋಗಕ್ಕೆ ಒಳಪಡಿಸಿಕೊಳ್ಳುವ ಒಂದು ವ್ಯವಸ್ಥೆಯಾಗಿದೆ. ಇಲ್ಲಿ ನಮ್ಮ ಸಹಜ ಗುಣವನ್ನು ಮರೆತು ಎಲ್ಲರನ್ನು ಒಳಗೊಂಡು ಶ್ರಮದಾನ, ಗಿಡ ನೆಡುವುದು, ಜಾಥಾ, ಅರಿವು, ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಇದಲ್ಲದೇ ಸರಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವ ವಾಹಕಗಳಾಗಿ ವಿದ್ಯಾರ್ಥಿಗಳು ಕೆಲಸ ಮಾಡುತ್ತಾರೆ. ತನ್ಮೂಲಕ ತಮ್ಮ ಮೂಲ ಗುಣಗಳನ್ನು ಬದಿಗೊತ್ತಿ ಸಹಿಷ್ಣತೆಯಿಂದ ಸಮಷ್ಟಿ ಧ್ಯೇಯೋದ್ದೇಶಗಳಿಗೆ ಕೆಲಸ ಮಾಡುತ್ತಾರೆ. ಸರಳತೆ, ಶಿಸ್ತು, ಭಾವೈಖ್ಯತೆಯನ್ನು ಕಲಿಯುತ್ತೇವೆ. ತನ್ಮೂಲಕ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ತಿಳಿಸಿದರು.
ಶಿಬಿರಗಳಲ್ಲಿ ಜನರೊಟ್ಟಿಗೆ ಬೆರೆಯುವುದು, ಅವರ ಆವ ಭಾವ, ಜೀವನ ವಿಧಾನಗಳನ್ನು ಗಮನಿಸುವುದು, ಈ ಸಂದರ್ಭದಲ್ಲಿ ನಾವು ಕಾರ್ಯಕ್ರಮಗಳ ಆಯೋಜನೆ, ಮಾತನಾಡುವ ಕಲೆ, ಸಂಘಟನೆ ಮಾಡುವುದನ್ನು ಕಲಿಯುತ್ತೇವೆ. ಅಲ್ಲದೇ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಈ ಎನ್ಎಸ್ಎಸ್ ಶಿಬಿರಗಳು ವೇದಿಕೆಯಾಗಿವೆ ಎಂದು ಹೇಳಿದರು.
ಕಾಲೇಜಿನಲ್ಲಿ ನಾವು ತಗರಗತಿಯೊಳಗೆ ಕುಳಿತು ಔಪಚಾರಿಕ ಶಿಕ್ಷಣವನ್ನು ಕಲಿಯುತ್ತೇವೆ. ಆದರೆ ಕಾಲೇಜಿನ ಹೊರಗೆ ಕಲಿಯುವು ಒಂದು ಪ್ರಮುಖ ವೇದಿಕೆ ಎನ್ಎಸ್ಎಸ್ ಆಗಿದೆ. ಇಲ್ಲಿ ಒಳಿತು-ಕೆಡಕು, ನಾಯಕತ್ವ, ಸಂಘಟನೆ, ಪರಿಸರ ಪ್ರೇಮದಂತಹ ಅನೌಪಚಾರಿಕ ಶಿಕ್ಷಣವನ್ನು ಪಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಎಸ್ಎಸ್ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಡಾ.ಕೆ.ಎಸ್. ಭಕ್ತವತ್ಸಲ ಅವರು ಮಾತನಾಡಿ, ಮೊಬೈಲ್ ಚಟ ಇಂದಿನ ವಿದ್ಯಾರ್ಥಿಗಳನ್ನು ಬೃಹದಾಕಾರವಾಗಿ ಕಾಡುತ್ತಿದೆ. ಇದರಿಂದ ಅವರು ಪರಿಣಾಮಕಾರಿಯಾಗಿ ಓದಿನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚೆ ಸರಕಾರ ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆಗೆ ಎಸ್ಒಪಿ ತರಲು ಚಿಂತನೆ ನಡೆಸಿದೆ. ಇದೊಂದು ಉತ್ತಮ ಚಿಂತನೆಯಾಗಿದ್ದು ಇದರಿಂದ ೧೮ ವರ್ಷ ಒಳಪಟ್ಟವರು ಮೊಬೈಲ್ ಬಳಕೆ ಮಾಡುವುದು ನಿಯಂತ್ರಣಕ್ಕೆ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ ಜೆಎಸ್ಎಸ್ ಪಾಲಿಟೆಕ್ನಿಕ್ನ ಎನ್ಎಸ್ಎಸ್ ಕಾರ್ಯಕ್ರಮ ಅಧಿ ಕಾರಿ ಬಿ. ಅಶ್ವಿನಿ ಅವರು ಮಾತನಾಡಿ, ನಾವು ನಮ್ಮ ಜೀವನದಲ್ಲಿ ತಂದುಕೊಳ್ಳುವ ಸಣ್ಣ ಬದಲಾವಣೆಗಳು ದೊಡ್ಡ ಮಟ್ಟದ ಪರಿಣಾಮಗಳನ್ನು ಉಂಟು ಮಾಡುತ್ತವೆ. ಎನ್ಎಸ್ಎಸ್ ನಂತ ಕಾರ್ಯಕ್ರಮದಲ್ಲಿ ಕಲಿತ ವಿಚಾರಗಳು ಆ ರೀತಿಯ ಪರಿಣಾಮ ಉಂಟು ಮಾಡುತ್ತವೆ. ಹಾಗಾಗಿ ಈ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆಂದು ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಬೀರೇಶ್ ಕಬಿನಿ ಮಾತನಾಡಿದರು. ಎನ್ಎಸ್ಎಸ್ ಸಹ ಕಾರ್ಯಕ್ರಮ ಅಧಿ ಕಾರಿಗಳಾದ ಬಿ. ಮಂಜು, ಬಿ.ಎಸ್. ಮಹದೇವಸ್ವಾಮಿ, ಪನ್ಯಾಸಕರು, ಎನ್ಎಸ್ಎಸ್ ವಿದ್ಯಾರ್ಥಿಗಳು ಹಾಗೂ ಇತರರು ಹಾಜರಿದ್ದರು.