
ಎಚ್. ಡಿ. ಕೋಟೆ : ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳ ಜನರ ಸಮಗ್ರ ಅಭಿವೃದ್ಧಿ, ಸ್ವಾವಲಂಬನೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಏಕಲ್ ಗ್ರಾಮಥೋನ್ ಫೌಂಡೇಶನ್ ಜಾರಿಗೆ ತಂದಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದು ಏಕಲ್ ಗ್ರಾಮಥೋನ್ ಫೌಂಡೇಶನ್ ಜಿಲ್ಲಾ ಅಧ್ಯಕ್ಷ ಕುಂಟೇಗೌಡ ಹೇಳಿದರು. ತಾಲೂಕಿನ ಹಂಪಾಪುರದಲ್ಲಿ 3 ತಿಂಗಳ ಕಾಲ ಹೊಲಿಗೆ ಮತ್ತು ಕಂಪ್ಯೂಟರ್ ತರಬೇತಿ ಕಲಿಕಾ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ಸಂಸ್ಥೆಯು ಉದ್ಯೋಗ ತರಬೇತಿ ನೀಡುವುದರ ಜೊತೆಗೆ ಶಿಸ್ತು, ಸಮಯಪ್ರಜ್ಞೆ ಹಾಗೂ ಸಂಸ್ಕಾರವನ್ನು ಕಲಿಸುತ್ತದೆ. ಪುರುಷನಿಗೆ ಸರಿಸಮನಾಗಿ ನಿಲ್ಲಲು ಅವಕಾಶ ಮಾಡಿಕೊಡುತ್ತದೆ. ಇದನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು. ತರಬೇತಿ ಮುಗಿದ ತಕ್ಷಣ ಸರ್ಟಿಫಿಕೇಟ್ ಮನೆಯಲ್ಲಿ ಇಟ್ಟುಕೊಂಡರೆ ಪ್ರಯೋಜನವಾಗಲ್ಲ. ಇಲ್ಲಿ ಕಲಿತಿರುವ ಕೆಲಸವನ್ನು ಮನೆಯಲ್ಲಿ ಮಾಡಬೇಕು. ಹೊಲಿಗೆ ಯಂತ್ರ ಇಟ್ಟುಕೊಂಡು ಮೊದಲಿಗೆ ನಿಮ್ಮ ಹಾಗೂ ನಿಮ್ಮ ಮನೆಯವರ ಬಟ್ಟೆಗಳನ್ನು ಹೊಲಿದುಕೊಡಬೇಕು. ಅದರಿಂದ ಬರುವ ಅಲ್ಪಸ್ವಲ್ಪ ಆದಾಯದಿಂದ ಸಂಸಾರ ಸರಿದೂಗಿಸಿಕೊಂಡು ಹೋಗಬೇಕು. ಸಣ್ಣಪುಟ್ಟ ಕೆಲಸಗಳಿಗೂ ಗಂಡನ ಬಳಿ ಕೈಚಾಚದೆ ನಿಮ್ಮ ದುಡಿಮೆಯಲ್ಲಿ ಹಣ ಸಂಪಾದಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಏಕಲ್ ಗ್ರಾಮಥೋನ್ ಫೌಂಡೇಶನ್ ಐವಿಡಿ ಮ್ಯಾನೇಜರ್ ಮಹದೇವಸ್ವಾಮಿ ಮಾತನಾಡಿ. ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸಂಸ್ಥೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಹೊಲಿಗೆ ತರಬೇತಿ ಹಾಗೂ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳು ಇಂದು ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಮೂರು ತಿಂಗಳ ಕಾಲ ತರಬೇತಿ ಇರಲಿದ್ದು, ತರಬೇತಿ ಪಡೆದವರು, ತಮ್ಮ ನೆರೆಮನೆಯವರಿಗೆ, ಸಂಬಂಧಿಕರಿಗೆ ಇದರ ಬಗ್ಗೆ ಮಾಹಿತಿ ನೀಡಿ, ಮುಂದಿನ ಬ್ಯಾಚ್ ಗೆ ಸೇರಿಸಬೇಕು. ಈ ಮೂಲಕ ಇತರರಿಗೂ ಈ ಸೌಲಭ್ಯ ಪಡೆದುಕೊಳ್ಳಲು ನೆರವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಂಟೇಗೌಡ, ನಟರಾಜು, ಪ್ರಕಾಶ್, ಚಿಕ್ಕಣ್ಣ, ಮಹದೇವಸ್ವಾಮಿ, ಉಮೇಶ್ ಬಿಎನ್ , ಚೈತ್ರಾ, ಹೇಮಲತಾ ಸೇರಿದಂತೆ ಕಲಿಕಾ ಅಭ್ಯರ್ಥಿಗಳು ಉಪಸ್ಥಿತರಿದ್ದರು.