Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಣ್ಣು, ನೀರು, ಗಾಳಿಯ ರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು; ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿ


ಮೈಸೂರು: ನಿಸರ್ಗ ನಮಗೆ ನೀಡಿರುವ ಮಣ್ಣು, ನೀರು, ಗಾಳಿಯ ರಕ್ಷಣೆಗೆ ಪ್ರತಿಯೊಬ್ಬರು ಕೆಲಸ ನಿರ್ವಹಿಸಬೇಕು ಎಂದು ಕೊಪ್ಪಳದ ಶ್ರೀಗವಿ ಮಠದ ಅಭಿನವ ಶ್ರೀಗವಿ ಸಿದ್ದೇಶ್ವರಮಹಾಸ್ವಾಮಿ ಕರೆ ನೀಡಿದರು.
ಭಾನುವಾರ ನಗರದ ಚಾಮುಂಡಿಬೆಟ್ಟದ ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಈ ಬಾರಿಯ ವಿಶ್ವಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಬೆಳ್ಳಿ ರಥದಲ್ಲಿ ಅಲಂಕೃತರಾಗಿ ವಿರಾಜಮಾನರಾಜರಾಗಿದ್ದ ಬೆಟ್ಟದ ಚಾಮುಂಡೇಶ್ವರಿಗೆ ಅಗ್ರ ಪ್ರಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದ ಅವರು, ನಿಸರ್ಗ ನಮಗೆ ಮಣ್ಣು, ಜಲ, ನೀರನ್ನು ನೀಡಿದೆ.
ಇವುಗಳನ್ನು ಮಲೀನಗೊಳಿಸಿದರೆ ಬದುಕುವುದು ಕಷ್ಟವಾಗುತ್ತದೆ. ಜೀವಿಸುವ ಹಕ್ಕನ್ನು ನಿಸರ್ಗ ನಮಗೆ ನೀಡಿದೆ, ಅದನ್ನು ಉಳಿಸಿಕೊಳ್ಳಬೇಕು. ಕಳೆದುಕೊಳ್ಳಬಾರದು. ಕೆರೆ, ಕಟ್ಟೆಗಳನ್ನು ಕಟ್ಟಲು ಪ್ರಯತ್ನಿಸಬೇಕು, ಸಾಲು, ಸಾಲು ಮರಗಳನ್ನು ನೆಡಬೇಕು. ಸಾಲು ಮರದ ತಿಮ್ಮಕ್ಕ ಇತಿಹಾಸ ನಿರ್ಮಿಸಿದ್ದಾರೆ. ಹಾಗಾಗಿ ವೃಕ್ಷಾಂದೋಲವನ್ನು ಮುಂದುವರಿಸಬೇಕು. ಪರಿಸರ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ಕಾವೇರಿ, ಕೃಷ್ಣೆ, ತುಂಗಭದ್ರೆಯAತಹ ನದಿಗಳು ನಮ್ಮ ನಾಡಿನ ಜೀವ ನದಿಗಳು. ಇವುಗಳಿಗೆ ಕಟ್ಟಿರುವ ಅಣೆಕಟ್ಟುಗಳು ಜನರ ಅನ್ನದ ತಟ್ಟೆಗಳು. ಈ ನದಿಗಳ ಮೂಲಗಳು ಬತ್ತಿಹೋದರೆ ಜನಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ಹಾಗಾಗಿ ನದಿ ಮೂಲಗಳ ಸಂರಕ್ಷಣೆ ಆಗಬೇಕು. ನದಿ ಮೂಲಗಳನ್ನು ನಾಶ ಮಾಡಬಾರದು. ನಾವು ನಮಗೆ ಅಗತ್ಯವಾಗಿರುವ ವಸ್ತುಗಳನ್ನು ಬೇರೆ ರಾಜ್ಯ, ದೇಶಗಳಿಂದ ಆಮದು ಮಾಡಿಕೊಳ್ಳಬಹುದು, ಆದರೆ ನದಿಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಕಾವೇರಿ, ಕೃಷ್ಣೆ, ತುಂಗಭದ್ರೆಯAತಹ ನದಿಗಳು ಬತ್ತಿ ಹೋದರೆ ಅವುಗಳನ್ನು ಎಲ್ಲಿಂದಲೂ ತರಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರಗಳು ನದಿಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ನೆಲ, ಜಲ ಮತ್ತು ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದೇವರ ಮುಂದೆ ಲಕ್ಷ ದೀಪಗಳನ್ನು ಹಚ್ಚುವುದರ ಜೊತೆಗೆ, ಒಂದು ವೃಕ್ಷವನ್ನು ನೆಟ್ಟು ಬೆಳೆಸಿದರೆ ಅದು ಪ್ರಕೃತಿಗೆ ಸಲ್ಲಿಸುವ ನಿಜವಾದ ಸೇವೆಯಾಗುತ್ತದೆ. ಪ್ರತಿಯೊಬ್ಬರು ನಾವು ವಾಸಿಸುತ್ತಿರುವ ಭೂಮಿಯನ್ನು ಪ್ರೀತಿಸಬೇಕು, ಮಣ್ಣಿನ ಸಂರಕ್ಷಣೆ ಮಾಡಿದರೆ ಮಾತ್ರ ಪ್ರತಿಯೊಂದಕ್ಕೂ ಆಹಾರ ಸಿಗಲು ಸಾಧ್ಯ ಎಂದು ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು.
ಪ್ರಸ್ತುತ ವಿಜ್ಞಾತ, ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಎಲ್ಲವನ್ನೂ ಗೂಗಲ್ ನಿಂದ ಡೌನ್‌ಲೋಡ್ ಮಾಡಬಹುದು, ಆದರೆ ತಿನ್ನುವ ಅನ್ನ ಮತ್ತು ಸಾರು, ಮುದ್ದೆಯನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ರೈತರು ಬೆವರು ಹರಿಸಿ ಬೆಳೆದ ಬೆಳೆಗಳಿಂದಲೇ ನಮಗೆ ಆಹಾರ ದೊರೆಯುತ್ತದೆ. ಹೀಗಾಗಿ ರೈತರ ಶ್ರಮವನ್ನು ಗೌರವಿಸಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಹಣ್ಣು ಮಾರಾಟ ಮಾಡುತ್ತಲೇ ಶಾಲೆ ನಿರ್ಮಿಸಿ ಮಕ್ಕಳ ಶಿಕ್ಷಣಕ್ಕೆ ನೆರವಾದ ಹರೇಕಳ ಹಾಜಬ್ಬ ಅವರ ಸಾಧನೆಯನ್ನು ಸ್ಮರಿಸಿದ ಶ್ರೀಗಳು, ಅವರಿಂದ ಪ್ರೇರಣೆ ಪಡೆದು ಉಳ್ಳವರು ತಮ್ಮ ಊರಿನ ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಗ್ರಂಥಾಲಯ, ಶಾಲೆಗಳನ್ನು ತೆರೆಯಬೇಕು. ಕೆರೆ, ಕಟ್ಟೆಗಳನ್ನು ನಿರ್ಮಿಸಬೇಕು, ಆ ಮೂಲಕ ಸಮಾಜದ ಋಣ ತೀರಿಸಬೇಕು ಎಂದು ಸಲಹೆ ನೀಡಿದರು.
ಮೈಸೂರು ಸಾಂಸ್ಕöÈತಿಕ ನಗರಿ, ಅರಮನೆಗಳ ನಗರಿ, ಸ್ವಚ್ಛತೆ ಮತ್ತು ಶಿಸ್ತಿಗೆ ಹೆಸರಾದ ನಗರ. ಇಂತಹ ಐತಿಹಾಸಿಕ ನಗರದಲ್ಲಿ ನಡೆಯುವ ದಸರಾ ಮಹೋತ್ಸವದ ವೈಭವದ ಹಿಂದೆ ಸಾವಿರಾರು ಕಾಣದ ಕೈಗಳ ಪರಿಶ್ರಮವಿದೆ. ಒಂದು ಕಾಲದಲ್ಲಿ ದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿ ಜನಸಾಮಾನ್ಯರ ಉತ್ಸವವಾಗಿದೆ ಎಂದು ಹೇಳಿದರು.
ಮೈಸೂರಿನ ದಸರಾ ಭೂತ, ವರ್ತಮಾನ ಮತ್ತು ಭವಿಷ್ಯಗಳ ತ್ರಿವೇಣಿ ಸಂಗಮವಾಗಿದೆ. ಮೈಸೂರು ದಸರಾ ಕೇವಲ ಉತ್ಸವವಲ್ಲ; ಅದು ನಾಡಿನ ಸಂಸ್ಕöÈತಿ, ಪರಂಪರೆ, ಮಾನವೀಯತೆ ಮತ್ತು ಸಾಮರಸ್ಯದ ಸಂಕೇತವಾಗಿದೆ. ಜಾತಿಯನ್ನು ನೋಡಿ ಸಮಾಜವನ್ನು ಕಟ್ಟುವುದಕ್ಕಿಂತ ನೀತಿಯನ್ನು ಆಧಾರವಾಗಿಟ್ಟುಕೊಂಡು ಸಮಾಜವನ್ನು ನಿರ್ಮಿಸಬೇಕು. ಮನುಷ್ಯನನ್ನು ಮನುಷ್ಯನಂತೆ ಪ್ರೀತಿಸುವುದೇ ನಿಜವಾದ ಮಾನವ ಧರ್ಮ. ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಾರಿದ `ಕಾಯಕವೇ ಕೈಲಾಸ’ ಎಂಬ ತತ್ವ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.
ಮೈಸೂರು ರಾಜಮನೆತನದ ಕೊಡುಗೆ ಸ್ಮರಣೀಯ;
ಮೈಸೂರು ರಾಜಮನೆತನದ ಕೊಡುಗೆಯನ್ನು ಸ್ಮರಿಸಿದ ಶ್ರೀಗಳು, ಮೈಸೂರು ದಸರಾ ಪರಂಪರೆಯನ್ನು ರಾಜಮನೆತನದ ಇತಿಹಾಸದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಿದ ಹಾಗೂ ರೈತರ ಬದುಕು ಹಸನಾಗಲು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಮಹನೀಯರ ಕೊಡುಗೆ ನಾಡಿನ ಪ್ರಗತಿಗೆ ಮಹತ್ವದ್ದಾಗಿದೆ. ರಾಣಿ ಕೆಂಪರಾಜಮ್ಮ ಅವರು ತಮ್ಮ ಆಭರಣಗಳನ್ನು ಒತ್ತೆಯಿಟ್ಟು ಅಣೆಕಟ್ಟು ನಿರ್ಮಾಣಕ್ಕೆ ನೆರವು ನೀಡಿದ ತ್ಯಾಗದ ಪರಂಪರೆ ನಮಗೆಲ್ಲ ಪ್ರೇರಣೆಯಾಗಿದೆ ಎಂದರು.

ಕನ್ನಡ ನಾಡಿನ ಜನರು ಸಾಧುಸಂತರಿಗೆ ಗೌರವ ನೀಡುವವರು, ವೀರರಿಗೆ ವೀರರಾಗಿರುವವರು ಹಾಗೂ ಪ್ರೀತಿಗೆ ಪ್ರೀತಿಯಿಂದಲೇ ಪ್ರತಿಕ್ರಿಯಿಸುವವರು. ಹತ್ತು ಮಕ್ಕಳನ್ನು ಸಾಕುವುದೇ ಕಷ್ಟವಾಗಿದ್ದ ಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹ ನೀಡಿದ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಗಳ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಕರ್ನಾಟಕವನ್ನು ರೈತರ ಬೆವರು, ಕಾರ್ಮಿಕರ ದುಡಿಮೆ, ವಿಜ್ಞಾನಿಗಳ ಜ್ಞಾನ ಮತ್ತು ಸಾಧುಸಂತರ ಪ್ರಾರ್ಥನೆಗಳು ರೂಪಿಸಿವೆ ಎಂದು ತಿಳಿಸಿದರು.
ರೈತರ ಬದುಕು ಹಸನಾಗಬೇಕು, ಪರಿಸರ ಸಂರಕ್ಷಿಸಲ್ಪಡಬೇಕು, ಶಿಕ್ಷಣ ಎಲ್ಲರಿಗೂ ದೊರೆಯಬೇಕು ಹಾಗೂ ಸಮಾಜದಲ್ಲಿ ಪ್ರೀತಿ ಮತ್ತು ಸಹಬಾಳ್ವೆ ಬೆಳೆಯಬೇಕು. ಕರ್ನಾಟಕದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುವ ಸಂಕಲ್ಪ ಮಾಡಬೇಕು ಎಂದು ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕರೆ ನೀಡಿದರು
“ಧರ್ಮವೆಂದರೆ ಮನುಷ್ಯನನ್ನು ಸ್ವರ್ಗಕ್ಕೆ ಕರೆದೊಯ್ಯುವುದಲ್ಲ; ನಾವು ಬದುಕುತ್ತಿರುವ ಭೂಮಿಯನ್ನೇ ಸ್ವರ್ಗವನ್ನಾಗಿ ಮಾಡುವುದು. ತುಳಿದು ಬದುಕುವುದಲ್ಲ, ತಿಳಿದು ಬದುಕುವುದು ನಿಜವಾದ ಧರ್ಮ” ಎಂದು ಪ್ರತಿಪಾದಿಸಿದರು.

ಪಂಪನಿAದ ಕುವೆಂಪುವರೆಗೆ ಸಾಮರಸ್ಯದ ಸಂದೇಶ;
ಆದಿಕವಿ ಪಂಪನಿAದ ರಾಷ್ಟçಕವಿ ಕುವೆಂಪುವರೆಗಿನ ಕನ್ನಡ ಸಾಹಿತ್ಯ ಪರಂಪರೆ ಸಾಮರಸ್ಯದ ಸಂದೇಶ ಸಾರುತ್ತದೆ. ನೀತಿ ಮತ್ತು ಪ್ರೀತಿಯ ನೆಲೆಯಲ್ಲಿ ನಾಡು ಕಟ್ಟಬೇಕು. ಗ್ರಂಥಗಳು ಬೇರೆ ಇರಬಹುದು, ಪಂಥಗಳು ಬೇರೆ ಇರಬಹುದು; ಆದರೆ ಮಾನವೀಯತೆ ಮತ್ತು ಸತ್ಯದ ಹಾದಿ ಒಂದೇ ಆಗಿರಬೇಕು ಎಂದು ಪ್ರತಿಪಾದಿಸಿದರು.

ದುಡಿಮೆಯನ್ನು ಪ್ರೀತಿಸಬೇಕೇ ಹೊರತು ಹಣವನ್ನಷ್ಟೇ ಆರಾಧಿಸಬಾರದು. ಶ್ರಮದ ಗೌರವ ಅರಿಯಬೇಕು. ದುಡಿದು ಬದುಕುವ ಸಂಸ್ಕöÈತಿ ಬೆಳೆಸಿಕೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಬುದ್ಧನ ಸಂದೇಶವನ್ನು ಸ್ಮರಿಸಿದ ಅವರು, “ಬೆಳಕಾಗು” ಎಂಬ ಆಶಯದಂತೆ ಪ್ರತಿಯೊಬ್ಬರೂ ಸಮಾಜಕ್ಕೆ ಬೆಳಕಾಗಬೇಕು. ಅರಮನೆಯಿಂದ ಬಂದ ಸಾಹಿತ್ಯಕ್ಕಿಂತ ಮಣ್ಣಿನಿಂದ, ಜನಜೀವನದಿಂದ ಮೂಡಿಬಂದ ಸಾಹಿತ್ಯಕ್ಕೂ ಅಪಾರ ಮೌಲ್ಯವಿದೆ ಎಂಬುದನ್ನು ಪ್ರತಿಪಾದಿಸಿದರು.

ಭೂಮಿಯನ್ನೇ ಸ್ವರ್ಗವಾಗಿಸೋಣ;

“ಮುಗಿಲಿನಿಂದ ಮಳೆ ಬರಬೇಕು, ಮಣ್ಣಿನಿಂದ ಬೆಲೆ ಬರಬೇಕು, ಜನರ ಬದುಕಿನಲ್ಲಿ ಕಳೆ ತುಂಬಬೇಕು. ಸಮಾಜದಲ್ಲಿ ಪ್ರೀತಿ, ಸಾಮರಸ್ಯ, ದುಡಿಮೆಯ ಗೌರವ ಮತ್ತು ಮಾನವೀಯ ಮೌಲ್ಯಗಳು ಬೆಳೆಯಬೇಕು ಎಂದು ಸಂದೇಶ ನೀಡಿದರು.