
ಮೈಸೂರು: ನಾಡ ಹಬ್ಬ ಮೈಸೂರು ದಸರಾ ವೀಕ್ಷಣೆಗೆಂದು ನಿತ್ಯವೂ ಬರುವ ಸಾವಿರಾರು ಮಂದಿ ಜನರ ಬಾಯಿ ನಾಲಿಗೆ ರುಚಿಯನ್ನು ತಣಿಸಿ, ಹೊಟ್ಟೆಯ ಹಸಿವನ್ನು ನೀಗಿಸುವ ದಸರಾ ಆಹಾರ ಮೇಳಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಮೈಸೂರು ದಸರಾ ಮಹೋತ್ಸವ ಆಹಾರ ಮೇಳಕ್ಕೆ ಚಾಲನೆ ನೀಡಿದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ರಿಜ್ವಾನ್ ಅರ್ಷದ್ ಮಾತನಾಡಿ, ನಾಡ ಹಬ್ಬ ದಸರಾ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಧರ್ಮದವರು ಸೇರಿ ಸಂಭ್ರಮಿಸುವAತಹ ಹಬ್ಬವಾಗಿದೆ ಎಂದು
ಹಿಂದೆ ಮಹಾರಾಜರು ನಡೆಸುತ್ತಿದ್ದ ರೀತಿಯಲ್ಲಿ ಎಲ್ಲಾ ಪಕ್ಷಗಳು ದಸರಾ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿವೆ. ಮುಖ್ಯಮಂತ್ರಿಗಳು ಈ ಬಾರಿ ಇನ್ನೂ ವಿಶೇಷವಾಗಿ ಮಾಡುವ ಉದ್ದೇಶದಿಂದ ವಿಶೇಷವಾಗಿ ಸಿದ್ದತೆ ಮಾಡಿದ್ದಾರೆ ಎಂದರು.
ಅ.25ರವರೆಗೂ ಆಹಾರ ಮೇಳ ನಡೆಯಲಿದ್ದು, 39 ವಿಶೇಷ ಆಹಾರ ಸ್ಟಾಲ್ ಸೇರಿದಂತೆ 140 ಸ್ಟಾಲ್ ಗಳಿವೆ. ಆಹಾರ ಮೇಳದಲ್ಲಿ ಕುಡಿಯುವ ನೀರು ಸೇರಿದಂತೆ ಆಹಾರವು ಗುಣಮಟ್ಟದಿಂದ ಕೂಡಿರಬೇಕು. ಆಹಾರ ಮೇಳಕ್ಕೆ ಆಗಮಿಸುವ ಜನರ ಆರೋಗ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದ್ದು, ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರತಿ 50 ಕಿ.ಮೀ ಗೆ ಆಹಾರ ಪದ್ಧತಿ ಬದಲಾಗುತ್ತದೆ. ಮೈಸೂರು, ಕರಾವಳಿ, ಉತ್ತರ ಕನ್ನಡ ಹೀಗೆ ಆಹಾರ ಪದ್ಧತಿಯಲ್ಲಿ ಬದಲಾವಣೆಯಿದೆ. ಆಹಾರ ಮೇಳದಲ್ಲಿ ಎಲ್ಲಾ ತರಹದ ಊಟ ದೊರೆಯುವುದು ವಿಶೇಷ ಎಂದರು.
ಆಹಾರ ಮೇಳ ಉದ್ಘಾಟನೆ ನನ್ನ ಭಾಗ್ಯ. ನಾನು ಮೈಸೂರಿನವನಾಗಿದ್ದು, ಮೈಸೂರು ಜನರ ಸೇವೆ ಸಲ್ಲಿಸಲು ಇದು ಸದವಕಾಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ದಸರಾ ಆಹಾರ ಮೇಳ ವಿಶೇಷಾಧಿಕಾರಿ ಬಿ..ಎನ್. ವೀಣಾ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.