
ಮೈಸೂರು: ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಜ್ಯದ 4500 ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಸಿ.ಎಂ. ಕಪ್ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡು ನಾಡಿನ ಕೀರ್ತಿಯನ್ನು ದೇಶದಾದ್ಯಂತ ಪಸರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಈ ವರ್ಷದ ಮೈಸೂರು ದಸರಾ ಉದ್ಘಾಟಕರಾದ ಕೊಪ್ಪಳ ಗವಿಮಠ ಸಂಸ್ಥಾನದ ಅಭಿನವಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿ ಹೇಳಿದರು.
ಮಂಗಳವಾರ ನಗರದ ಚಾಮುಂಡಿ ವಿಹಾರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಅವರು, ಮೊದಲಿಗೆ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಕಲಬುರ್ಗಿ ವಿಭಾಗಗಳ ಮಧ್ಯ ನಡೆದಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ವೀಕ್ಷಿಸಿದರು. ಬಳಿಕ ಅಥ್ಲೆಟಿಕ್ ಸಿಂಥೆಟಿಕ್ ಅಂಕಣಕ್ಕೆ ಆಗಮಿಸಿ, ಮಹಿಳೆಯರ ಹಾಗೂ ಪುರುಷರ 400* 4 ರಿಲೇ ವೀಕ್ಷಿಸಿ ಬಹುಮಾನ ವಿತರಿಸಿದರು. ನಂತರ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಕುಸ್ತಿ ಮನೆಗೆ ಆಗಮಿಸಿ, ದೇಸಿ ಆಟ ಮಕ್ಕಳ ಕುಸ್ತಿಯನ್ನು ನೋಡಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗದಗಿನ ಚಿಕ್ಕೆನಕೊಪ್ಪೆ ಮಠದ ಶಿವಶಾಂತವೀರ ಶ್ರೀಗಳು, ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ದಸರಾ ಕ್ರೀಡಾ ಉಪ ಸಮಿತಿ ಕಾರ್ಯಾಧ್ಯಕ್ಷರಾದ ಡಾ. ಜಿತೇಂದ್ರ ಶೆಟ್ಟಿ, ಜಂಟಿ ನಿರ್ದೇಶಕರಾದ ಸುಭಾಷ್ ಚಂದ್ರ, ಉಪ ನಿರ್ದೇಶಕರಾದ ಎಂ.ಸಿ. ರಮೇಶ್, ಸಹಾಯಕ ನಿರ್ದೇಶಕರುಗಳಾದ ಮಂಜುನಾಥಸ್ವಾಮಿ, ಡಾ. ಶರಣು ಗೋಗೇರಿ, ವಿಠ್ಠಲ್ ಜಾಬ್ಗೌಡರ್ ಇರೇಶ್ ನಾಯಕ್, ತರಬೇತುದಾರರಾದ ವಿಜಯಕೃಷ್ಣ, ವಿನೋದ್ ಕುಮಾರ್ ಸೇರಿದಂತೆ ಹಲವಾರು ಅಧಿಕಾರಿಗಳು ತರಬೇತುದಾರರು ಸೇರಿದಂತೆ ಸಾವಿರಾರು ಕ್ರೀಡಾಪಟುಗಳು ಉಪಸ್ಥಿತರಿದ್ದರು.