
ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ 7ನೇ ದಿನವಾದ ಶನಿವಾರ ನಡೆದ ರೈತ ದಸರಾದ ಹಾಲು ಕರೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೈಸೂರು ಬೆಂಗಳೂರು ಗ್ರಾಮಾಂತರದ ಅಶ್ವಿನಿ ಅಂಬರೀಶ್ ಬಿಡದಿ ಅವರು ಮೊದಲ ಸ್ಥಾನದ ಜೊತೆಗೆ 1 ಲಕ್ಷ ಬಹುಮಾನ ಪಡೆದುಕೊಂಡಿದ್ದಾರೆ.
ಇಂದು ಜೆ. ಕೆ ಮೈದಾನದಲ್ಲಿ ರೈತ ದಸರಾ 2026 ಕರ್ನಾಟಕ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ಬಹುಮಾನ ವಿತರಣೆ ಕಾರ್ಯಕ್ರಮವ ನ್ನು ಆಯೋಜಿಸಲಾಗಿತ್ತು.
ಮೊದಲ ಸ್ಥಾನವನ್ನು ಬೆಂಗಳೂರು ಗ್ರಾಮಾಂತರದ ಅಶ್ವಿನಿ ಅಂಬರೀಶ್ ಬಿಡದಿ (ಅಂಕಣ ಸಂಖ್ಯೆ 4) ಅವರು ತಮ್ಮ H.F ಕಪ್ಪು ಬಿಳಿ ಹಸುವಿನಿಂದ ಬೆಳಿಗ್ಗೆ 23.300 ಲೀಟರ್ ಮತ್ತು ಸಂಜೆ 20.900 ಲೀಟರ್ ಸೇರಿ ಒಟ್ಟು **44.200 ಲೀಟರ್** ಹಾಲು ಕರೆಯುವ ಮೂಲಕ ಪಡೆದುಕೊಂಡಿರುತ್ತಾರೆ. ಎರಡನೇ ಸ್ಥಾನವನ್ನು ಸಾಲಿಗ್ರಾಮದ ಶ್ರೀ ಗುರುರಾಘವೇಂದ್ರ ಡೈರಿ ಫಾರಂ (ಅಂಕಣ ಸಂಖ್ಯೆ 9) ಒಟ್ಟು **42.400 ಲೀಟರ್** ಹಾಲು ಕರೆಯುವುದರ ಮೂಲಕ ಪಡೆದಿದೆ. ಮೂರನೇ ಸ್ಥಾನದಲ್ಲಿ ಬೆಂಗಳೂರಿನ ರವಿ.ಎಸ್ ಬಿನ್ ಸಂಜೀವರಾಜು (ಅಂಕಣ ಸಂಖ್ಯೆ 1) ಅವರು ಒಟ್ಟು **41.750 ಲೀಟರ್** ಹಾಲನ್ನು ಪಡೆದು ಮೂರನೇ ಸ್ಥಾನ ಗಳಿಸಿದ್ದಾರೆ. ಹಾಗೆಯೇ ನಾಲ್ಕನೇ ಸ್ಥಾನವನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಕಿರಣ್ ಗೌಡ (ಅಂಕಣ ಸಂಖ್ಯೆ 13) ಅವರು ಒಟ್ಟು **40.550 ಲೀಟರ್** ಹಾಲು ಕರೆಯುವ ಮೂಲಕ ಪಡೆದುಕೊಂಡಿರುತ್ತಾರೆ
ಮುಖ್ಯ ಪಶುವೈದ್ಯಾಧಿಕಾರಿಯಾದ ಡಾ. ನಂಜೇಶ್ ಬಿ. ಎಸ್. ಅವರು ಮಾತನಾಡಿ ಈ ಸ್ಪರ್ಧೆಯು ಕಳೆದ ಎರಡು ದಿನಗಳಿಂದ ವಿವಿಧ ಹಂತಗಳಲ್ಲಿ ನಡೆದುಕೊಂಡು ಬಂದಿತ್ತು. ಅಕ್ಟೊಬರ್ 16 ರಂದು ಟ್ರಯಲ್ ರೇಸ್ ನಡೆದರೆ, 17 ರಂದು ಅಂತಿಮ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನೆರವೇರಿತು ಎಂದರು.
ಈ ಸ್ಪರ್ಧೆಯನ್ನು ಯಶಸ್ವಿಗೊಳಿಸಲು ಮೈಸೂರು ಜಿಲ್ಲಾ ಗೋಪಾಲಕರ ಸಂಘದ ಅಧ್ಯಕ್ಷರಾದ ನಾಗಭೂಷಣ್ ರವರು ಹಾಗೂ ಅವರ ಸಮಿತಿಯ ಸದಸ್ಯರು ಬಹಳ ಶ್ರಮಿಸಿದ್ದು, ಹೈನುಗಾರರಿಗೆ ತಕ್ಕ ಸಹಕಾರವನ್ನು ನೀಡಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 1 ಲಕ್ಷ ರೂಪಾಯಿ, ದ್ವಿತೀಯ ಬಹುಮಾನವಾಗಿ 80,000 ರೂಪಾಯಿ, ತೃತೀಯ ಬಹುಮಾನವಾಗಿ 60,000 ರೂಪಾಯಿ ಹಾಗೂ ನಾಲ್ಕನೇ ಬಹುಮಾನವಾಗಿ 40,000 ರೂಪಾಯಿಗಳನ್ನು ನಿಗದಿಪಡಿಸಲಾಗಿತ್ತು. ಇದರೊಂದಿಗೆ, ದಿನಕ್ಕೆ 25 ಕೆ.ಜಿ ಗಿಂತ ಹೆಚ್ಚು ಹಾಲು ಕರೆಯುವ ಎಲ್ಲಾ ಹಸುಗಳಿಗೂ ತಲಾ 10,000 ರೂಪಾಯಿಗಳ ಪ್ರೋತ್ಸಾಹ ಧನವನ್ನು ಸಹ ನೀಡಲಾಗುವುದು ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಮಿಲ್ಕಿಂಗ್ ಮೆಷಿನ್ ಬಳಸಿ ಹಾಲು ಕರೆಯಲು ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಅತಿ ಹೆಚ್ಚು ಜಾನುವಾರುಗಳು ನೋಂದಾಯಿಸಿಕೊಂಡಿದ್ದು, ಅಂತಿಮವಾಗಿ 18 ಜಾನುವಾರುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದವು. ರೈತರನ್ನು ಉತ್ತೇಜಿಸುವ ಇಂತಹ ಕಾರ್ಯಕ್ರಮಗಳು ಗ್ರಾಮೀಣಾಭಿವೃದ್ಧಿಗೆ ಮತ್ತು ಹೈನುಗಾರಿಕೆಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತವೆ ಎಂದು ತಿಳಿಸಿದರು.
ರೈತ ದಸರಾ ಉಪಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಟಿ.ಎಂ., ಇಲಾಖೆಯ ಉಪನಿರ್ದೇಶಕರಾದ ಡಾ. ಸಿದ್ಧರಾಮು, ರೈತ ದಸರಾ ಉಪಸಮಿತಿಯ ಕಾರ್ಯದರ್ಶಿ ಹಾಗೂ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಜಿ.ಎಚ್. ಮಂಜುನಾಥ್, ಮೈಸೂರು ವಿಭಾಗದ ಜಂಟಿ ನಿರ್ದೇಶಕರು (ಪಶುಪಾಲನಾ ಇಲಾಖೆ) ಡಾ. ಶ್ರೀಧರ್ ಮೂರ್ತಿ. ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕರಾದ ಡಾ. ರಮೇಶ್, ಮೈಸೂರು ನಗರ ಗೋಪಾಲಕರ ಸಂಘದ ಅಧ್ಯಕ್ಷರಾದ ನಾಗಭೂಷಣ್, ಗೋಪಾಲಕರ ಸಂಘದ ಉಪಾಧ್ಯಕ್ಷರು ಹಾಗೂ ಮಾಜಿ ಸದಸ್ಯರಾದ ಗೋಪಿ, ಎಲ್ಲಾ ಪದಾಧಿಕಾರಿಗಳು, ಗೋಪಾಲಕರು, ರೈತರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದವರು ಮತ್ತಿತರರು ಉಪಸ್ಥಿತರಿದ್ದರು.


