
ಮೈಸೂರು; ಮೈಸೂರಿನ ಅಂಬಾವಿಲಾಸ ಅರಮನೆ ಸರ್ಕಾರದ್ದು, ರಾಜ ಮನೆತನದವರು ಇರಲು ಸ್ವಲ್ಪ ಜಾಗ ನೀಡಲಾಗಿದೆ ಅಷ್ಟೇ ಎಂಬ ಉಸ್ತುವಾರಿ ಸಚಿವ ಯತೀಂದ್ರರವರ ಹೇಳಿಕೆಯನ್ನು ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂವಿಧಾನದ ಆಶಯದಂತೆ ರಾಜಮನೆತನದವರು ನಡೆದುಕೊಂಡು ಮಾದರಿ ಎನಿಸಿಕೊಂಡಿದ್ದಾರೆ. ಸಾರ್ವಜನಿಕರ ಸ್ವತ್ತಾಗಿದ್ದ ಮೂಡಾದ 14 ಸೈಟುಗಳನ್ನು ಪ್ರಜಾಪ್ರಭುತ್ವಕ್ಕೆ ಸರ್ಕಾರಕ್ಕೆ ಮೋಸ ಮಾಡಿ, ಕದ್ದ ಮಾಲನ್ನು ವಾಪಸ್ ನೀಡುವ ಕಳ್ಳರಂತೆ ವಾಪಸ್ ಮಾಡಿರುವವರಿಗೆ, ರಾಜ ಮನೆತನದವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಡಾ.ಯತೀಂದ್ರ ಸಿದ್ದರಾಮಯ್ಯನವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ವಿಪರ್ಯಾಸದ ಸಂಗತಿ. ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸ್ಥಾನ ಪಲ್ಲಟದಿಂದಾಗಿ ಇವರಿಗೆ ಸಮಾಧಾನಕರ ಬಹುಮಾನ ಸಿಕ್ಕಿದೆ ಎಂಬುದು ಜನಜನಿತವಾಗಿದೆ. ಇರುವಷ್ಟು ದಿನ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಲಿ, ಈ ರೀತಿ ಮಾತನಾಡಿ ನೀವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಜ ಮನೆತನದವರ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡುವ ಸಚಿವರು, ಜನಸಾಮಾನ್ಯರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಅರ್ಥವಾಗುತ್ತದೆ. ಮೈಸೂರಿಗೆ ರಾಜ ಮನೆತನದವರು ಅನನ್ಯ ಕೊಡುಗೆಗಳನ್ನು ನೀಡಿದ್ದಾರೆ. ಮೈಸೂರು ಅರಮನೆ ಕನ್ನಂಬಾಡಿ ಕಟ್ಟೆ, ಲಲಿತ ಮಹಲ್, ಜಗನ್ಮೋಹನ್ ಪ್ಯಾಲೇಸ್, ದೇವರಾಜ ಮಾರುಕಟ್ಟೆ ಸೇರಿದಂತೆ ಇನ್ನು ಹಲವಾರು ಭವ್ಯ ಕಟ್ಟಡಗಳನ್ನು ಜನಸೇವೆಗೆ ನೀಡಿದ್ದಾರೆ. ರಾಜಮಾತೆ ಪ್ರಮೋದಾ ದೇವಿಯವರು ಪತ್ರ ಬರೆದಿರುವುದು ಸರ್ಕಾರಕ್ಕೆ, ನೀವು ಒಬ್ಬರೇ ಸರ್ಕಾರವಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ ಎಂದಿದ್ದಾರೆ.